ಅಣ್ಣಾ ಹಝಾರೆ ನಿರಶನ ಎರಡನೇ ದಿನಕ್ಕೆ
ಮುಂಬೈ, ಜ.31: ಪ್ರಬಲ ಲೋಕಪಾಲ ಮತ್ತು ಲೋಕಾಯುಕ್ತ ವ್ಯವಸ್ಥೆ ಸ್ಥಾಪನೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಸ್ವಗ್ರಾಮ ರಾಲೇಗಣ್ ಸಿದ್ಧಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿರಿಸಿದೆ.
ಐದು ವರ್ಷವಾದರೂ ಮೋದಿ ನೇತೃತ್ವದ ಸರಕಾರ ಲೋಕಪಾಲರ ನೇಮಕದ ಬಗ್ಗೆ ಹಾಗೂ ಮಹಾರಾಷ್ಟ್ರ ಸರಕಾರ ಲೋಕಾಯುಕ್ತ ನೇಮಕಕ್ಕೆ ಕ್ರಮ ಕೈಗೊಂಡಿಲ್ಲ. ತನ್ನ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧವಲ್ಲ. ದೇಶದ ಒಳಿತಿಗಾಗಿ ಈ ಪ್ರತಿಭಟನೆ ಎಂದು ಹಝಾರೆ ಹೇಳಿದ್ದಾರೆ. ಜೊತೆಗೆ ರೈತರ ಸಮಸ್ಯೆ ನಿವಾರಣೆಗೆ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು ಎಂದು ಒತ್ತಾಯಿಸಿ ನಿರಶನ ನಡೆಸುತ್ತಿದ್ದು ಗುರುವಾರ ರಾಲೇಗಣ್ ಸಿದ್ಧಿಯಲ್ಲಿ ಜನರು ಸ್ವಯಂಪ್ರೇರಣೆಯಿಂದ ಬಂದ್ ಆಚರಿಸಿ ಹಝಾರೆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಬಳಿಕ ಗ್ರಾಮಸ್ಥರು ತಹಶೀಲ್ದಾರ್‌ಗೆ ಪತ್ರವೊಂದನ್ನು ಹಸ್ತಾಂತರಿಸಿ ಹಝಾರೆಯವರ ಬೇಡಿಕೆಯ ಬಗ್ಗೆ ಗಮನ ಹರಿಸುವಂತೆ ಕೋರಿದ್ದಾರೆ. ಗುರುವಾರ ಹಝಾರೆಯವರ ಆರೋಗ್ಯಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರು, 80 ವರ್ಷವಾಗಿರುವ ಹಝಾರೆಯವರ ಆರೋಗ್ಯದ ಬಗ್ಗೆ ನಿಕಟ ಗಮನ ಹರಿಸುವಂತೆ ಸಹವರ್ತಿಗಳಿಗೆ ಸೂಚಿಸಿದ್ದಾರೆ.
ಲೋಕಪಾಲ ಮತ್ತು ಲೋಕಾಯುಕ್ತರ ನೇಮಕ, ರೈತರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಭರವಸೆಗಳನ್ನು ಸರಕಾರ ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಹಝಾರೆ ತಿಳಿಸಿದ್ದಾರೆ.