ಬೇಂದ್ರೆ-ಕುವೆಂಪು ಸಾಹಿತ್ಯ ಒಟ್ಟುಗೂಡಿಸಬೇಕು: ಡಾ.ರಾಜೇಗೌಡ ಹೊಸಹಳ್ಳಿ
ಬೆಂಗಳೂರು, ಜ.31: ಕನ್ನಡ ಸಾಹಿತ್ಯ ಲೋಕದ ಇಬ್ಬರು ದಿಗ್ಗಜರಾದ ಕುವೆಂಪು ಹಾಗೂ ಬೇಂದ್ರೆಯನ್ನು ಒಟ್ಟುಗೂಡಿಸುವ ಕೆಲಸ ಕನ್ನಡ ಸಾಹಿತ್ಯಲೋಕದಲ್ಲಿ ಆಗಬೇಕು ಎಂದು ಸಾಹಿತಿ ಡಾ.ರಾಜೇಗೌಡ ಹೊಸಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ಕಸಾಪದಲ್ಲಿ ದ.ರಾ.ಬೇಂದ್ರೆ ಕಾವ್ಯಕೂಟದ ವತಿಯಿಂದ ವರಕವಿ ದಾ.ರಾ.ಬೇಂದ್ರೆ ಅವರ 123 ನೆ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಬೇಂದ್ರೆ ಗೀತ ಗಾಯನ, ಸನ್ಮಾನ, ಬಹುಮಾನ ವಿತರಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕದ ಸಾಹಿತ್ಯಲೋಕದಲ್ಲಿ ದಕ್ಷಿಣದಲ್ಲಿ ಕುವೆಂಪು, ಉತ್ತರದಲ್ಲಿ ಬೇಂದ್ರೆ ನಾಡು ಕಂಡಂತಹ ಮಹಾನ್ ಕವಿಗಳಾಗಿದ್ದಾರೆ. ಅವರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣುವಂತಾಗಬೇಕು. ಈ ಇಬ್ಬರ ಸಾಹಿತ್ಯವನ್ನೂ ಒಟ್ಟುಗೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕಾವ್ಯಕೂಟದ ಅಧ್ಯಕ್ಷ ಡಾ.ಜಿ.ಕೃಷ್ಣಪ್ಪ ಅಪಾರವಾಗಿ ಶ್ರಮಿಸುತ್ತಿದ್ದಾರೆ. ಮುಂದೊಂದು ದಿನ ಇಬ್ಬರನ್ನು ಒಂದೇ ಕಡೆ ಓದುವಂತ ಅವಕಾಶ ಸಿಗಲಿದೆ ಎಂದು ಹೇಳಿದರು.
ನಾಡಿನ ದಿಗ್ಗಜ ದ.ರಾ.ಬೇಂದ್ರೆ ಅವರ ಆಡುಭಾಷೆಯ ಪದಗಳು ಹೆಚ್ಚು ಜನಪ್ರಿಯವಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಬೇಂದ್ರೆಯ ಆಡುಭಾಷೆಯ ಕವಿತೆಗಳು ಕಳೆದುಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಕೃಷ್ಣಪ್ಪ ಅವರು ಬೇಂದ್ರೆ ಸಾಹಿತ್ಯವನ್ನು ಸರಳೀಕರಿಸಿ ಪುಸ್ತಕ ಬರೆಯುತ್ತಿರುವುದು ಸಂತೋಷದ ಸಂಗತಿ ಎಂದರು.
ಹಲವಾರು ವರ್ಷಗಳಿಂದ ಎಲ್ಲ ಕ್ಷೇತ್ರದಲ್ಲಿಯೂ ರಾಜಕೀಯ ಪ್ರವೇಶ ಪಡೆದುಕೊಂಡಿದೆ. ವಿದ್ವಾಂಸ ಶಂಕರ ಮೊಕಾಶಿ ಪುಣೆಕರ್ ಎಂಬುವವರು ಕುವೆಂಪು ಅವರ ಕುವೆಂಪು ರಾಮಾಯಣವನ್ನು ಅನುವಾದ ಮಾಡಿದ್ದರು. ಆದರೆ, ವ್ಯವಸ್ಥಿತವಾಗಿ ಅದು ಪ್ರಕಟವಾಗದಂತೆ ನೋಡಿಕೊಂಡರು ಎಂದ ಅವರು, ಕುವೆಂಪು ಹಾಗೂ ಬೇಂದ್ರೆ ಕಾವ್ಯದಲ್ಲಿ ಗಾಂಧೀಯಿಸಂ ಕಾಣುತ್ತದೆ. ಕನ್ನಡ ಸಾಹಿತ್ಯ ಲೋಕ ಇರುವಷ್ಟು ದಿನ ಅವರು ಅಜರಾಮರಾಗಿರುತ್ತಾರೆ ಎಂದು ನುಡಿದರು.
ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಜೆ.ಸದಾಶಿವ ಮಾತನಾಡಿ, ಕಾವ್ಯ ಕಷ್ಟ, ಅರ್ಥ ಮಾಡಿಕೊಳ್ಳುವುದು ಅತ್ಯಂತ ತ್ರಾಸದಾಯಕ. ಇಂತಹ ಸಂದರ್ಭದಲ್ಲಿ ಸತತ ಉತ್ಸಾಹದಿಂದ ಕೃಷ್ಣಪ್ಪ ಅವರು ಕವಿತೆಗಳನ್ನು ವಿಮರ್ಶೆ ಮಾಡಿ, ಸರಳ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಮಾಡಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕವಿ ಸುಬ್ಬು ಹೊಲೆಯಾರ್, ಸಾಹಿತಿ ಪ್ರೊ.ಶಿವರಾಮಯ್ಯ, ದ.ರಾ.ಬೇಂದ್ರೆ ಕಾವ್ಯಕೂಟದ ಅಧ್ಯಕ್ಷ ಡಾ.ಜಿ.ಕೃಷ್ಣಪ್ಪ, ಉಪಾಧ್ಯಕ್ಷ ಶ್ರ.ದೇ.ಪಾರ್ಶ್ವನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







