ಅಬುಧಾಬಿ: ಅನಿವಾಸಿ ಕನ್ನಡಿಗರ ಒಕ್ಕೂಟದಿಂದ ಉಚಿತ ವೈದ್ಯಕೀಯ ಶಿಬಿರ

ಅಬುಧಾಬಿ, ಜ.26: ಅನಿವಾಸಿ ಕನ್ನಡಿಗರ ಒಕ್ಕೂಟ, ಅಬುಧಾಬಿ ವತಿಯಿಂದ ಯುನಿವರ್ಸಲ್ ಆಸ್ಪತ್ರೆ ಇದರ ಸಹಯೋಗದೊಂದಿಗೆ 70ನೇ ಗಣರಾಜ್ಯೋತ್ಸವದ ಅಂಗವಾಗಿ ಇತ್ತೀಚೆಗೆ ಉಚಿತ ವೈದ್ಯಕೀಯ ಶಿಬಿರವು ನಡೆಯಿತು. ಭಾರತದ ವಿವಿದ ರಾಜ್ಯಗಳಿಂದ ಭಾಗವಹಿಸಿದ ಅನಿವಾಸಿಗರು ಆರೋಗ್ಯ ಮತ್ತು ಪರಿಸರದ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಹರಡುವ ಭಾಗವಾಗಿ ನಡೆಸಿದ ಉಚಿತ ವೈದ್ಯಕೀಯ ಶಿಬಿರ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿವಾಸಿ ಕನ್ನಡಿಗರ ಒಕ್ಕೂಟದ ಉಪಾಧ್ಯಕ್ಷರಾದ ಜನಾಬ್ ಮುಹಮ್ಮದ್ ನಾಸಿರ್, ಭಾಗವಹಿಸಿದ ಸರ್ವ ಅನಿವಾಸಿ ಭಾರತೀಯರಿಗೂ 70ನೇ ವರ್ಷದ ಗಣರಾಜ್ಯೋತ್ಸವದ ಶುಭ ಹಾರೈಸಿದರು. ಯುನಿವರ್ಸಲ್ ಆಸ್ಪತ್ರೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜನಾಬ್ ಶಬೀರ್ ನೆಲ್ಲಿಕೋಡು ರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗಹಿಸಿದ ಬ್ಯಾರೀಸ್ ವೆಲ್ಫೇರ್ ಫಾರಂ ಪ್ರಧಾನ ಕಾರ್ಯದರ್ಶಿಗಳಾದ ಜನಾಬ್ ಅಬ್ದುಲ್ಲಾ ಮದುಮೂಲೆ ಅಂ, ಮಾತನಾಡಿ, 'ಇಂದು ನಮ್ಮ ಪ್ರಜಾಪ್ರಭುತ್ವ ಮತ್ತು ಗಣರಾಜ್ಯದ ಮೌಲ್ಯಗಳನ್ನು ಸ್ಮರಿಸುವ ಒಂದು ದಿನವಾಗಿದೆ. ಸ್ವಾತಂತ್ರ್ಯ, ಭ್ರಾತೃತ್ವ, ನಮ್ಮ ಸಮಾಜದಲ್ಲಿನ ಸಮಾನತೆ ಮತ್ತು ಎಲ್ಲಾ ನಾಗರಿಕರ ನಡುವೆ ನಮ್ಮ ಬದ್ಧತೆಯನ್ನು ಪುನಃ ದೃಢೀಕರಿಸುವ ಸಂದರ್ಭವಾಗಿದೆ ಇದು. ಎಲ್ಲಕ್ಕಿಂತ ಹೆಚ್ಚಾಗಿ, ಇದು ಭಾರತ ಮತ್ತು ನಮ್ಮ ಭಾರತೀಯತೆಯ ಸ್ಪೂರ್ತಿಯನ್ನು ಆಚರಿಸುವ ಸನ್ನಿವೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಜನಾಬ್ ಅಬ್ದುಲ್ ರಶೀದ್ ಬಿಜೈ ಮಾತನಾಡಿ, ಎಲ್ಲರೂ ದೇಶಕ್ಕಾಗಿ ಮತ್ತು ಯುಎಇ ಯಲ್ಲಿರುವ ಭಾರತೀಯ ಸಮುದಾಯಕ್ಕಾಗಿ ತಮ್ಮ ಉತ್ತಮ ಕೆಲಸವನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು. ಅನಿವಾಸಿ ಕನ್ನಡಿಗರ ಒಕ್ಕೂಟ ನಡೆಸಿದ ಸಾಮಾಜಿಕ ಸೇವೆಯ ಬಗ್ಗೆ ಭಾಗವಹಿಸಿದ ಸಭಿಕರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣಕ್ಕಾಗಿ ಯುಎಇ ಸರ್ಕಾರಕ್ಕೆ ಅವರು ಕೃತಜ್ಞತೆಯನ್ನು ಸಲ್ಲಿಸಿದರು. ಭಾಗವಹಿಸಿದ ಸರ್ವ ಅನಿವಾಸಿ ಭಾರತೀಯರು, ಯುನಿವರ್ಸಲ್ ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿಗಳ ಸಂಪೂರ್ಣ ಸಹಕಾರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಒಕ್ಕೂಟದ ಕಾರ್ಯನಿರ್ವಾಹಕ ಸದಸ್ಯರಾದ ಜನಾಬ್ ಸಿರಾಜ್ ಬನ್ನೂರು ರವರು ಗಣರಾಜ್ಯೋತ್ಸವವದ ಸಂದೇಶವನ್ನು ನೀಡಿದರು. "'ವೈವಿಧ್ಯತೆಯ ಏಕತೆ' ಎಂಬ ಪರಿಕಲ್ಪನೆಯನ್ನು ಆಧರಿಸಿ ಭಾರತವು ರೂಪುಗೊಂಡಿತು ಮತ್ತು ಅದರ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಆಗಿರುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಅಸುರಕ್ಷತೆ ಮತ್ತು ಸಂವಿಧಾನದ ಮೇಲಾಗುವ ಆಕ್ರಮಣಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಉತ್ತಮ ನಾಳೆಗಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯಲು ಭಾಗವಹಿಸಿದ ಎಲ್ಲಾ ಅನಿವಾಸಿಗರು ಒಗ್ಗೂಡಬೇಕೆಂದು ಅವರು ಆಗ್ರಹಿಸಿದರು.
ಯುನಿವರ್ಸಲ್ ಆಸ್ಪತ್ರೆಯ ತಜ್ಞರಾದ ಡಾ. ರಿಯಾಸ್ ಮೇತರ್, ಡಾ. ಸಾಕ್ಷಿ ಮತ್ತು ಡಾ. ರಘುನಾಥ್ ಪ್ರಭು ರವರು ಆರೋಗ್ಯಕರ ಜೀವನದ ಕುರಿತು ಮಾಹಿತಿ ನೀಡಿ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನ ಶೈಲಿಯ ಪ್ರಯೋಜನಗಳನ್ನು ಅವರು ವಿವರಿಸಿದರು. ಒಬ್ಬರ ಆರೋಗ್ಯಕ್ಕೆ ಕ್ರಮಬದ್ಧವಾದ ದೈಹಿಕ ಚಟುವಟಿಕೆಯು ಹೇಗೆ ಪ್ರಮುಖ ಸಂಗತಿಯಾಗಿದೆ ಮತ್ತು ಅದು ಹೃದಯ ರಕ್ತನಾಳದ ಕಾಯಿಲೆ ಮತ್ತು ಮಧುಮೇಹ ರೋಗದ ಅಪಾಯಗಳನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದರ ಬಗ್ಗೆ ವಿವರಿಸಿದರು.
ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಎಚ್ಸಿವಿ ಪರೀಕ್ಷೆ (ಹೆಪಟೈಟಿಸ್ ಸಿ ವೈರಸ್), ಶಿಫಾರಸು ಮಾಡಿದ ಔಷಧಿಗಳು, ಪ್ರಯೋಗಾಲಯ ಪರೀಕ್ಷೆಗಳು, ರಿಯಾಯಿತಿ ದಂತ ಸೇವೆಗಳು ಮತ್ತು ಭೌತಿಕ ದ್ರವ್ಯರಾಶಿ ಸೂಚಿ (BMI) ಪರೀಕ್ಷೆಗಳನ್ನು ಮಾಡಲಾಯಿತು.
ಒಕ್ಕೂಟದ ಸಂಘಟನಾ ಸಮಿತಿ ಸದಸ್ಯರು, ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರ ಜೊತೆಗೆ ಅತಿಥಿಗಳು ಒಳರೋಗಿಗಳನ್ನು ಭೇಟಿ ಮಾಡಿ ಹೂಗುಚ್ಛಗಳನ್ನು ನೀಡಿ ತ್ವರಿತವಾಗಿ ಚೇತರಿಸಿಕೊಳ್ಳಲು ಶುಭ ಹಾರೈಸಿದರು.
ಸುಮಾರು ನೂರೈವತ್ತಕ್ಕೂ ಹೆಚ್ಚು ಅನಿವಾಸಿಗರ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೈದ್ಯಕೀಯ ಶಿಬಿರದ ಸದುಪಯೋಗವನ್ನು ಪಡೆದರು. ಅನಿವಾಸಿ ಕನ್ನಡಿಗರ ಒಕ್ಕೂಟ, ಅಬು ಧಾಬಿ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸ್ವಯಂಸೇವಕರು ಈ ಕಾರ್ಯಕ್ರಮವನ್ನು ಶಿಸ್ತಿನಿಂದ ಯಶಸ್ಸುಗೊಳಿಸಲು ಸಹಕರಿಸಿದರು.
ಯುನಿವರ್ಸಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಜಾರ್ಜ್ ಕೋಶಿ, ನಿರ್ದೇಶಕ ಡಾ.ಚಂದ್ರ, ನಿರ್ವಹಣಾಧಿಕಾರಿ ಡಾ. ಸುನಿಲ್ ಕುಮಾರ್ ಹಾಗೂ ಸಮೀಯುಲ್ಲಾಹ್ ಮುಹಮ್ಮದ್ ಹಬೀಬ್ CA ಅತಿಥಿಗಳಾಗಿ ಭಾಗವಹಿಸಿ ನೆರೆದ ಅನಿವಾಸಿಗಳಿಗೆ ಗಣರಾಜ್ಯೋತ್ಸವ ಶುಭ ಹಾರೈಸಿದರು.
ಕಾರ್ಯಕ್ರಮದ ನಿರ್ದೇಶಕರಾದ ಶಾಫಿ ತಿಂಗಳಾಡಿ ಉಪಸ್ಥಿತರಾದ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಜನಾಬ್ ಅಬ್ದುಲ್ ರಶೀದ್ ಬಿಜೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶರೀಫ್ ಸರ್ವೆ ಧನ್ಯವಾದಗಳನ್ನು ಅರ್ಪಿಸಿದರು. ಮುಹಮ್ಮದ್ ಸಿರಾಜ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.





























































































































