ನಕಲಿ ವಿಶ್ವವಿದ್ಯಾನಿಲಯ ಹಗರಣ: 8 ಭಾರತ ಮೂಲದ ವ್ಯಕ್ತಿಗಳ ಬಂಧನ
600 ವಿದ್ಯಾರ್ಥಿಗಳ ಗಡಿಪಾರು, ಜೈಲು?

ವಾಶಿಂಗ್ಟನ್, ಜ. 31: ಅಮೆರಿಕದ ಗುಪ್ತಚರ ಏಜಂಟರು ನಡೆಸುತ್ತಿರುವ ನಕಲಿ ವಿಶ್ವವಿದ್ಯಾನಿಲಯವೊಂದರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದ 8 ಭಾರತ ಮೂಲದ ಪುರುಷರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಭಾರತದ ನೂರಾರು ವಿದ್ಯಾರ್ಥಿಗಳು ಗಡಿಪಾರು ಅಥವಾ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಬಂಧನದ ಬೆನ್ನಿಗೇ, ಅರ್ಹತೆಯಿಲ್ಲದ ವಿದೇಶಿಯರು ಅಮೆರಿಕದಲ್ಲಿ ವಾಸಿಸಲು ಹಾಗೂ ಕೆಲಸ ಮಾಡಲು ಸಾಧ್ಯವಾಗುವಂತೆ ತಮ್ಮ ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗಪಡಿಸಿಕೊಳ್ಳುವ ವಂಚಕರನ್ನು ಸೆರೆ ಹಿಡಿಯಲು ದಾಳಿಗಳನ್ನು ನಡೆಸಲಾಯಿತು.
ಅಮೆರಿಕದಾದ್ಯಂತದಿಂದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂಬುದಾಗಿ ಮಿಶಿಗನ್ ರಾಜ್ಯದ ಕಾನೂನು ಇಲಾಖೆ ಪ್ರಕಟಿಸಿದೆ. ಬಂಧಿತರು ಭಾರತೀಯರು ಅಥವಾ ಭಾರತ ಮೂಲದ ಅಮೆರಿಕ ಪ್ರಜೆಗಳು ಎನ್ನುವುದನ್ನು ಅವರ ಹೆಸರುಗಳು ಸೂಚಿಸಿವೆ.
ಬಂಧಿತರ ವಿರುದ್ಧ ವೀಸಾ ವಂಚನೆ ಮತ್ತು ಹಣಕ್ಕಾಗಿ ವಿದೇಶಿಯರಿಗೆ ಆಶ್ರಯ ನೀಡಿದ ಆರೋಪಗಳನ್ನು ಹೊರಿಸಲಾಗಿದೆ.
ಬಂಧಿತರ ಸಂಖ್ಯೆ 200?
ಗುಪ್ತ ಕಾರ್ಯಾಚರಣೆಯ ಭಾಗವಾಗಿ ವಿಶ್ವವಿದ್ಯಾನಿಲಯವನ್ನು 2015ರಲ್ಲಿ ಸ್ಥಾಪಿಸಲಾಗಿತ್ತು. ವಲಸೆ ವಂಚನೆಯಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸುವುದಕ್ಕಾಗಿ ಇದನ್ನು ಆರಂಭಿಸಲಾಗಿತ್ತು.
ಮಿಶಿಗನ್ ರಾಜ್ಯದಲ್ಲಿರುವ ನಕಲಿ ವಿಶ್ವವಿದ್ಯಾನಿಲಯ ‘ಫಾರ್ಮಿಂಗ್ಟನ್ ವಿಶ್ವವಿದ್ಯಾನಿಲಯ’ದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡರು.
ಈ ವಿಶ್ವವಿದ್ಯಾನಿಲಯದಲ್ಲಿ ಸುಮಾರು 600 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಂಧಿತರ ಸಂಖ್ಯೆ 200 ಆಗಬಹುದು ಎಂಬುದಾಗಿ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಈ ಎಲ್ಲ 600 ಮಂದಿಯನ್ನು ಅಮೆರಿಕ ಗಡಿಪಾರುಗೊಳಿಸಬಹುದು ಹಾಗೂ ಕೆಲವರನ್ನು ಜೈಲಿಗೆ ಕಳುಹಿಸಬಹುದು ಎಂದು ಮೂಲಗಳು ಹೇಳಿವೆ.







