ಸಾಹಿತ್ಯಕ್ಕೆ ಸ್ವಚ್ಛ ಮನಸ್ಸು ರೂಪಿಸುವ ಜವಾಬ್ದಾರಿ ಇದೆ: ಡಾ.ವರದರಾಜ ಚಂದ್ರಗಿರಿ
'ವ್ಯಸನಮುಕ್ತ ಬದುಕು-ಸ್ವಸ್ಥ ಸಮಾಜ’ ಕುರಿತ ಗೋಷ್ಠಿ

ಮಂಗಳೂರು, ಜ.31: ಬದುಕಿಗೆ ತೀವ್ರವಾಗಿ ಸ್ಪಂದಿಸುವ ವಿಷಯಗಳೇ ಇದ್ದರೂ ಕೂಡಾ ಸಾಹಿತ್ಯವು ಬದುಕಿನಿಂದ ಹೊರತಾಗಿಲ್ಲ. ಯುದ್ಧ ಕಾಲದಲ್ಲೂ ಕೂಡ ಕೆಲವು ಮನಸ್ಸುಗಳು ಶಾಂತಿಯನ್ನು ಹಪಹಪಿಸುವುದಾದರೆ ಅದಕ್ಕೆ ಸಾಹಿತ್ಯದ ಮನಸ್ಸುಗಳೇ ಕಾರಣ. ಸ್ವಾತಂತ್ರ ಸಂಗ್ರಾಮದ ಕಾಲದಲ್ಲಿ ದೇಶದ ಎಲ್ಲಾ ಭಾಷೆಗಳಲ್ಲೂ ಕೂಡ ಆ ಬಗ್ಗೆ ಸಾಹಿತ್ಯ ಸೃಷ್ಟಿಯಾಗಿದೆ. ಕರ್ನಾಟಕ ಏಕೀಕರಣ, ಸಾಮಾಜಿಕ ಅಸಮಾನತೆ, ಚಳುವಳಿ, ಪರಿಸರ ಹೀಗೆ ಎಲ್ಲದಕ್ಕೂ ಸಾಹಿತ್ಯ ಸ್ಪರ್ಶ ನೀಡಿದೆ. ಹಾಗಾಗಿ ಸಾಹಿತ್ಯಕ್ಕೆ ಸ್ವಚ್ಛ ಮನಸ್ಸು ರೂಪಿಸುವ ಜವಾಬ್ದಾರಿ ಸಾಕಷ್ಟಿದೆ ಎಂದು ಪ್ರಾಧ್ಯಾಪಕ ಡಾ.ವರದರಾಜ ಚಂದ್ರಗಿರಿ ಹೇಳಿದರು.
ನಗರದ ಪುರಭವನದಲ್ಲಿ ಜರುಗುತ್ತಿರುವ ದ.ಕ.ಜಿಲ್ಲಾ 23ನೆ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೆ ದಿನವಾದ ಗುರುವಾರ ನಡೆದ ‘ವ್ಯಸನಮುಕ್ತ ಬದುಕು-ಸ್ವಸ್ಥ ಸಮಾಜ’ ಕುರಿತ ಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು.
ಸಮಾಜದಲ್ಲಿ ಇಂದು ಸ್ವಚ್ಛ ಮತ್ತು ಸ್ವಸ್ಥ ಕಾಣಲು ಸಾಧ್ಯವಿದೆ. ಜೀವಪದ ಆಲೋಚನೆಗೆ ಒತ್ತು ನೀಡುವ ಸಾಹಿತ್ಯದ ಮೂಲಕವೂ ಜನರ ಮನಸ್ಸನ್ನು ಸ್ವಚ್ಛ ಮಾಡಬಹುದಾಗಿದೆ. ಸಾಹಿತ್ಯವೇ ಎಲ್ಲಾ ವೌಲ್ಯಗಳ ತಾಯಿ ಅಥವಾ ವಾಹಕವಾದ ಕಾರಣ ಯುವ ಜನಾಂಗ ಸಾಹಿತ್ಯದತ್ತ ಹೊರಹೊಮ್ಮಬೇಕು. ಸಾಹಿತ್ಯದ ಕಡೆಗೆ ತೆರೆದುಕೊಳ್ಳುವವರು ಜೀವನ ಮೌಲ್ಯ ಎತ್ತಿ ಹಿಡಿಯಬಲ್ಲರು ಎಂದ ಡಾ.ವರದರಾಜ ಚಂದ್ರಗಿರಿ ಸಾಹಿತ್ಯದಿಂದ ಮನರಂಜೆ ಸಿಗುತ್ತದೆ ಎಂಬ ಭ್ರಮೆ ಯಾರಿಗೂ ಬೇಡ. ಆದರೆ ಸ್ವಚ್ಛ ಮನಸ್ಸಿನತ್ತ ಹೋಗುವ ದಾರಿಯನ್ನು ಸಾಹಿತ್ಯ ತೋರಿಸಿಕೊಡುತ್ತದೆ. ಮೌನದ ಸಂವಹನದ ಮೂಲಕವೂ ಸಾಹಿತ್ಯದ ಮೌಲ್ಯವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಸೈಬರ್ ಕ್ರೈಂ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಸವಿತ್ರ ತೇಜ, ತಿಮ್ಮಯ್ಯ ನಾಯ್ಕ ಕ್ರಮವಾಗಿ ಸ್ವಚ್ಛ ಬದುಕು, ಮಾದಕ ದ್ರವ್ಯ ವ್ಯಸನ, ಮದ್ಯಮುಕ್ತ ಬದುಕು ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಬಿ.ಎಂ.ಹೆಗ್ಡೆ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಏಕಗಮ್ಯಾನಂದ ಸ್ವಾಮೀಜಿ, ಕೆನರಾ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಎಸ್.ಕಾಮತ್, ರತ್ನ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದರು. ಪ್ರೊ. ಶ್ರೀಧರ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.







