ಭೂಗತ ಪಾತಕಿ ರವಿ ಪೂಜಾರಿ ಬಂಧನ

ಹೊಸದಿಲ್ಲಿ,ಜ.31: ಕಳೆದ ಹದಿನೈದು ವರ್ಷಗಳಿಂದ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕದ ಸೆನೆಗಲ್‌ನಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೂಜಾರಿ ಬಂಧನ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಸೆನೆಗಲ್ ಸರಕಾರಕ್ಕೆ ಭಾರತ ಮನವಿ ಮಾಡಲಿದೆ ಎಂದು ವರದಿ ತಿಳಿಸಿದೆ. ರವಿ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಬೆಂಗಳೂರು ನಗರ ಪೊಲೀಸರು ಇಂಟರ್ಪೋಲ್‌ಗೆ ಮನವಿ ಮಾಡಿದ್ದರು. ಕಳೆದ ಒಂದೂವರೆ ದಶಕದಿಂದ ಆಸ್ಟ್ರೇಲಿಯ ಮತ್ತು ದುಬೈಯಲ್ಲಿ ತಲೆಮರೆಸಿಕೊಂಡೇ ಭಾರತದಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ ರವಿ ಪೂಜಾರಿ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾರೆ.
ಮುಂಬೈ ಭೂಗತಲೋಕದ ಹಲವು ಪಾತಕಿಗಳ ಜೊತೆ ಕೆಲಸ ಮಾಡಿದ್ದ ಪೂಜಾರಿ ಎರಡು ದಶಕಗಳ ಹಿಂದೆ ತನ್ನದೇ ಗುಂಪನ್ನು ರಚಿಸಿ ಕೊಲೆ, ಸುಲಿಗೆ ಮಾಡುವುದನ್ನು ಮುಂದುವರಿಸಿದ್ದ. ಈ ತಿಂಗಳ ಆರಂಭದಲ್ಲಿ ಆತನ ಇಬ್ಬರು ಸಹಚರರಾದ ವಿಲಿಯಂ ರಾಡ್ರಿಕ್ಸ್ ಮತ್ತು ಆಕಾಶ್ ಶೆಟ್ಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಬಂಧಿತರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೊಮ್ಮೆ ಸದ್ಯ ಬಂಧನದಲ್ಲಿರುವ ಛೋಟಾ ರಾಜನ್ ಸಾಂಗತ್ಯವನ್ನು ರವಿ ಪೂಜಾರಿ ಹೊಂದಿದ್ದ. 90ರ ದಶಕದಲ್ಲಿ ಇವರಿಬ್ಬರೂ ದಾವೂದ್ ಇಬ್ರಾಹಿಂನ ಡಿ-ಕಂಪೆನಿಗೆ ಕೆಲಸ ಮಾಡುತ್ತಿದ್ದರು. 2015ರಲ್ಲಿ ಇಂಡೊನೇಶ್ಯಾದ ಬಾಲಿಯಲ್ಲಿ ಛೋಟಾ ರಾಜನ್ ಬಂಧನದ ನಂತರ ಆತನನ್ನು ಭಾರತಕ್ಕೆ ಗಡಿಪಾರುಗೊಳಿಸಲಾಗಿತ್ತು.
ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಕಾಶ್ಮೀರದ ಪ್ರತ್ಯೇಕವಾದಿ ಸಂಘಟನೆ ಹುರಿಯತ್‌ನ ನಾಯಕ ಸೈಯದ್ ಅಲಿ ಶಾ ಗಿಲಾನಿ ಹಾಗೂ ಇತರ ಎಲ್ಲ ದೇಶವಿರೋಧಿ ಧ್ವನಿಗಳನ್ನು ನಿಗ್ರಹಿಸುವುದಾಗಿ ಆತ ಎಚ್ಚರಿಕೆ ನೀಡುವ ಮೂಲಕ ರವಿ ಪೂಜಾರಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದ.







