ದನದ ಮಾಂಸದ ಆಹಾರ ಮಾರಾಟ ಆರೋಪ: ಬಜರಂಗದಳ ಕಾರ್ಯಕರ್ತರಿಂದ ವೃದ್ಧೆ ಮಹಿಳೆಯರಿಬ್ಬರ ಮೇಲೆ ಹಲ್ಲೆ
ಟೆಂಟ್‌ಗೆ ಬೆಂಕಿ

ಸಕಲೇಶಪುರ, ಜ.31: ದನದ ಮಾಂಸದ ಅಹಾರ ಮಾರುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ವೃದ್ಧೆಯರ ಮೇಲೆ ಹಲ್ಲೆ ನಡೆಸಿದ ಬಜರಂಗದಳದ ಕಾರ್ಯಕರ್ತರು ಟೆಂಟ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಪಟ್ಟಣದ ಎಪಿಎಂಸಿ ಸಂತೆ ಮೈದಾನದಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಬಾಳೆಗದ್ದೆ ನಿವಾಸಿಗಳಾದ ಖಮರುನ್ನಿಸಾ(70) ಮತ್ತು ಶಂಶಾದ್(70) ಹಲ್ಲೆಗೊಳಗಾದ ಮಹಿಳೆಯರು.
ಸುಮಾರು 40 ವರ್ಷಗಳಿಂದ ಸಂತೆ ಮೈದಾನದಲ್ಲಿ ಸಣ್ಣ ಟೆಂಟ್‌ವೊಂದನ್ನು ಹಾಕಿ ಮಾಂಸದ ಅಹಾರ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಈ ಇಬ್ಬರು ವೃದ್ಧೆ ಮಹಿಳೆಯರ ಮೇಲೆ 8 ಮಂದಿ ಇದ್ದ ಬಜರಂಗದಳ ಕಾರ್ಯಕರ್ತರು ದನದ ಮಾಂಸದ ಅಡುಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಟೆಂಟ್‌ಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಿಸಿ ಸಾಂಬಾರು ವೃದ್ಧೆಯ ಮೇಲೆ ಚೆಲ್ಲಿ ಇನ್ನೊಮ್ಮೆ ಇಲ್ಲಿ ಮಾಂಸದ ಅಡುಗೆ ಮಾಡಿ ಮಾರಿದರೆ ನಿಮ್ಮನ್ನೇ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಲು ಪೋಲಿಸರು ಹಿಂದೇಟು: ಸಂತ್ರಸ್ತರ ಆರೋಪ
ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ವೃದ್ಧೆ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪತ್ರಿಕೆಯೊಂದಿಗೆ ಮಾತನಾಡಿದ ಹಲ್ಲೆಗೊಳಗಾದ ಖಮರುನ್ನೀಸಾ, ನಾವು ಸುಮಾರು 40 ವರ್ಷಗಳಿಂದ ಸಂತೆ, ಸಂತೆಗಳಿಗೆ ಹೋಗಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇದು ನಮ್ಮ ವೃತ್ತಿಯಾಗಿದೆ. ಈ ರೀತಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದರೆ ನಾವು ಬದುಕುವುದು ಹೇಗೆ? ನಮಗೆ ನ್ಯಾಯ ಕೊಡುತ್ತಾರೆ ಎಂದು ಠಾಣೆಗೆ ಹೋದರೆ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ. ‘‘ಘಟನೆ ನಡೆದ ಸ್ಥಳದಲ್ಲಿ ಮಾಂಸ ದೊರಕಿದ್ದು ನಿಮ್ಮ ಮೇಲೂ ಪ್ರಕರಣ ದಾಖಲಿಸಬೇಕಾಗುತ್ತದೆ’’ ಎಂದು ಪೊಲೀಸರು ನಮ್ಮನ್ನೇ ಎಚ್ಚರಿಸುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೇವೆ. ಶಾಸಕರ ಸಹಾಯದ ನಿರಿಕ್ಷೆಯಲ್ಲಿದ್ದೇವೆ ತಿಳಿಸಿದ್ದಾರೆ.








