ಸಿದ್ದಾಪುರ: ಗಾಂಧಿ ಹಂತಕ ಗೋಡ್ಸೆಯ ಪ್ರತಿಕೃತಿಯನ್ನು ನೇಣಿಗೇರಿಸಿದ ಎಸ್ ಡಿಪಿಐ ಕಾರ್ಯಕರ್ತರು

ಸಿದ್ದಾಪುರ (ಕೊಡಗು), ಜ.31: ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಗುಂಡಿಕ್ಕಿದ ಭಯೋತ್ಪಾದಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುವವರನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸುವಂತೆ ಎಸ್ ಡಿಪಿಐ ಆಗ್ರಹಿಸಿದೆ.
ಗಾಂಧಿ ಹುತಾತ್ಮ ದಿನದಂದು ಆಲಿಘಡ್ ನಲ್ಲಿ ಹಿಂದು ಮಹಾಸಭೆಯ ಕಾರ್ಯಕರ್ತರು ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿ ಅದರಿಂದ ರಕ್ತ ಚಿಮ್ಮುವಂತೆ ಮಾಡಿರುವುದನ್ನು ಹಾಗೂ ಗೋಡ್ಸೆ ಪರ ಘೋಷಣೆಗಳನ್ನು ಕೂಗಿ ಪ್ರತಿಮೆಗೆ ಮಾಲಾರ್ಪಣೆ ನಡೆಸಿರುವ ಘಟನೆಯನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಇಲ್ಲಿಯ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿದರು.
ಗೋಡ್ಸೆ ಹಾಗೂ ಹಿಂದು ಮಹಾಸಭಾ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದ ಎಸ್ ಡಿಪಿಐ ಕಾರ್ಯಕರ್ತರು ಗೋಡ್ಸೆಯ ಪ್ರತಿಕೃತಿಯನ್ನು ನೇಣಿಗೇರಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ಗಾಂಧಿಯ ಪ್ರತಿಕೃತಿಗೆ ಗುಂಡಿಕ್ಕಿರುವ ಘಟನೆ ಅತ್ಯಂತ ಖಂಡನೀಯ. ಹಿಂದು ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಸೇರಿದಂತೆ ಎಲ್ಲರನ್ನು ಬಂಧಿಸುವುದರ ಜೊತೆಗೆ ಕಠಿಣ ಶಿಕ್ಷೆ ವಿಧಿಸಬೇಕು. ಇವರು ಎಂದೂ ಸಹ ದೇಶದ ಸಮಗ್ರತೆ, ಐಕ್ಯತೆ, ಸಾರ್ವಭೌಮತೆ ಮತ್ತು ಪ್ರಜಾಪ್ರಭುತ್ವ ಜಾತ್ಯಾತೀತ ವ್ಯಸ್ಥೆಗೆ ಬೆಲೆ ಕೊಟ್ಟವರಲ್ಲ ಎಂದರು.
ದೇಶದ ಮೊಟ್ಟ ಮೊದಲ ಭಯೋತ್ಪಾದನಾ ಕೃತ್ಯಕ್ಕೆ ಕಾರಣವಾದವನು ಆರೆಸ್ಸೆಸ್ ನ ನಾಥೂರಾಮ್ ಗೋಡ್ಸೆ ಎಂದವರು ಹೇಳಿದರು. ಜಾತಿ, ಧರ್ಮ, ವರ್ಣ ಭೇದವಿಲ್ಲದೆ, ಅಹಿಂಸಾ ಮಾರ್ಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮಹಾನ್ ವ್ಯಕ್ತಿಯನ್ನು ಈ ರೀತಿಯಾಗಿ ಚಿತ್ರಿಸಿರುವವರನ್ನು ದೇಶದ್ರೋಹದಡಿಯಲ್ಲಿ ಬಂಧಿಸಬೇಕೆಂದು ಆಗ್ರಹಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮುಸ್ತಫ ಮಾತನಾಡಿ, ಹಲವು ವರ್ಷಗಳಿಂದ ಗಾಂಧಿ ಹುತಾತ್ಮ ದಿನದಂದು ಸಂಘಪರಿವಾರ ಪ್ರಾಯೋಜಿತ ಸಂಘಟನೆಗಳು ನಾಥೂರಾಮ್ ಗೋಡ್ಸೆಯನ್ನು ಪೂಜಿಸುವ ಮೂಲಕ ಆತನನ್ನು ವೈಭವೀಕರಿಸುವ ಪ್ರಯತ್ನಗಳನ್ನು ನಡೆಸುತಾ ಬಂದಿದೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳದ ಪರಿಣಾಮವಾಗಿ ಇಂದು ಗಾಂಧಿಯನ್ನು ಕೊಂದ ಅದೇ ಮನಸ್ಥಿತಿಯ ಗುಂಪು ಮಹಾತ್ಮನ ಪ್ರತಿಕೃತಿಗೂ ಗುಂಡು ಹಾರಿಸಿದ್ದಾರೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ಈ ಸಂಘಟನೆಯ ಎಲ್ಲಾ ನಾಯಕರುಗಳನ್ನು ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶೌಕತ್ ಅಲಿ, ಹಸ್ಸನ್, ಶಂಶೀರ್, ಬಶೀರ್ ಸೇರಿದಂತೆ ಇತರರು ಇದ್ದರು.



















