ಮೋದಿಯ ಚುನಾವಣಾ ಬಜೆಟ್‌ನ 10 ಪ್ರಮುಖ ಅಂಶಗಳು
ಹೊಸದಿಲ್ಲಿ, ಫೆ.1: ನರೇಂದ್ರ ಮೋದಿ ಸರಕಾರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು , ಎಲ್ಲ ವರ್ಗದ ಜನರನ್ನೂ ಖುಷಿಪಡಿಸುವ ಮಧ್ಯಂತರ ಬಜೆಟ್ ಮಂಡಿಸಿದ್ದು ಮಧ್ಯಮ ವರ್ಗ, ಗ್ರಾಮೀಣ ಜನತೆ, ರೈತರು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಕೊಡುಗೆ ನೀಡಿದೆ. ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್‌ನ ಪ್ರಮುಖ 10 ಅಂಶಗಳಿವು.
1. ತೆರಿಗೆ ಪದ್ಧತಿ:
* ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಹೆಚ್ಚಳ.
*ಇದುವರೆಗೆ ಒಂದು ವಸತಿಗೃಹಕ್ಕೆ ಅನ್ವಯವಾಗುತ್ತಿದ್ದ ಬಂಡವಾಳ ತೆರಿಗೆ ಲಾಭ ಇನ್ನು ಮುಂದೆ ಎರಡು ವಸತಿಗೃಹಕ್ಕೆ ಅನ್ವಯಿಸುತ್ತದೆ. ಈ ವಿಭಾಗದಲ್ಲಿ ಗರಿಷ್ಟ 2 ಕೋಟಿ ರೂ.ವರೆಗಿನ ಬಂಡವಾಳ ತೆರಿಗೆ ಲಾಭವನ್ನು ಜೀವಮಾನದಲ್ಲಿ ಒಂದು ಬಾರಿ ಪಡೆಯಬಹುದು.
2.ಕೃಷಿ ಕ್ಷೇತ್ರ: ಸಣ್ಣ ಮತ್ತು ಬಡರೈತರಿಗೆ ವಾರ್ಷಿಕ 6 ಸಾವಿರ ರೂ. ಖಚಿತ ಆದಾಯ.
*ಈ ಯೋಜನೆಗೆ 75 ಸಾವಿರ ಕೋಟಿ ನಿಗದಿಗೊಳಿಸಿದ ಸರಕಾರ . * ಪ್ರಾಕೃತಿಕ ವಿಪತ್ತಿನಿಂದ ಸಂತ್ರಸ್ತರಾದವರಿಗೆ ಶೇ.2ರಷ್ಟು ಬಡ್ಡಿ ಸಹಾಯಧನ. ಸಕಾಲಿಕವಾಗಿ ಸಾಲ ಮರುಪಾವತಿಸಿದವರಿಗೆ ಶೇ.3 ಹೆಚ್ಚುವರಿ ಸಹಾಯಧನ.
* ಪಶು ಸಂಗೋಪನೆ, ಮೀನುಗಾರಿಕೆ ಮುಂತಾದ ಕಸುಬು ನಡೆಸುವ ರೈತರಿಗೆ ಶೇ.2 ಬಡ್ಡಿ ಸಹಾಯಧನ.
3. ಗ್ರಾಮೀಣ ಕ್ಷೇತ್ರ:
*ಗ್ರಾಮಸಡಕ್ ಯೋಜನೆಯಡಿ 2019-20ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಿಸಲು 19 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.
*ಎಂನರೇಗ(ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಯೋಜನೆಗೆ 60 ಸಾವಿರ ಕೋಟಿ ರೂ. ನಿಗದಿಗೊಳಿಸಲಾಗಿದೆ.
4. ಉದ್ಯೋಗ:
* ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ನೂತನ ಸಾಮಾಜಿಕ ಸುರಕ್ಷಾ ಕವಚ ಯೋಜನೆ ಜಾರಿ.
* ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ಬಳಿಕ ಪ್ರತೀ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯುವ ಯೋಜನೆ.
* ಈ ಯೋಜನೆಯಿಂದ ಅಸಂಘಟಿತ ವಲಯದ ಸುಮಾರು 10 ಕೋಟಿ ಕಾರ್ಮಿಕರಿಗೆ ಅನುಕೂಲ. ಮುಂದಿನ 5 ವರ್ಷದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ವಿಶ್ವದ ಅತ್ಯಂತ ಬೃಹತ್ ಪಿಂಚಣಿ ಯೋಜನೆಯಾಗಲಿದೆ.
5. ಜಿಎಸ್‌ಟಿ:
* ಮನೆಗಳನ್ನು ಖರೀದಿಸುವವರಿಗೆ ಜಿಎಸ್‌ಟಿ ಕಡಿತಗೊಳಿಸುವ ವಿಧಾನಗಳನ್ನು ಸಚಿವರ ತಂಡವೊಂದು ಶಿಫಾರಸು ಮಾಡಲಿದೆ.
* ಜಿಎಸ್‌ಟಿಯಡಿ ನೋಂದಣೆಯಾಗಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು 1 ಕೋಟಿ ರೂ.ವರೆಗಿನ ಸಾಲಕ್ಕೆ ಶೇ.2ರಷ್ಟು ಬಡ್ಡಿ ಸಹಾಯಧನ ಪಡೆಯಲಿದೆ.
6. ಅರ್ಥ ವ್ಯವಸ್ಥೆ:
* ಈ ವರ್ಷ ಇದುವರೆಗಿನ ತಿಂಗಳ ಸರಾಸರಿ ತೆರಿಗೆ ಸಂಗ್ರಹ 97,100 ಕೋ. ರೂ.
*2019-20ರಲ್ಲಿ ಒಟ್ಟು ಮಾರುಕಟ್ಟೆ ಸಾಲ 7.04 ಲಕ್ಷ ಕೋಟಿ ಎಂದು ನಿರೀಕ್ಷಿಸಲಾಗಿದೆ.
7. ಹಣಕಾಸಿನ ಲೆಕ್ಕಾಚಾರ:
*2018-19ರ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ.3.4ರಷ್ಟು ಎಂದು ಅಂದಾಜಿಸಲಾಗಿದೆ.
* 2019-20ರ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ. 3.4ರಷ್ಟು ಎಂದು ಅಂದಾಜಿಸಲಾಗಿದೆ.
* 2020-21ರ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ.3ರಷ್ಟು ಎಂದು ಅಂದಾಜಿಸಲಾಗಿದೆ.
* 2020ರ ಮಾರ್ಚ್ ಅವಧಿಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.1ರಷ್ಟು ಮತ್ತು 2021ರ ಮಾರ್ಚ್‌ಗೆ ಶೇ.3ರ ಪ್ರಮಾಣಕ್ಕೆ ಇಳಿಸುವ ಗುರಿ ಹೊಂದಲಾಗಿತ್ತು.
* ದೇಶದ ಪ್ರಸಕ್ತ (2018/19)ಕರೆಂಟ್ ಅಕೌಂಟ್ ಕೊರತೆ ಜಿಡಿಪಿಯ ಶೇ.2.5ರ ಪ್ರಮಾಣದಲ್ಲಿದೆ.
* ಜಿಡಿಪಿ ಪ್ರಮಾಣದ ಋಣಭಾರವನ್ನು 2024/25ರ ವೇಳೆಗೆ ಶೇ.40ಕ್ಕೆ ಇಳಿಸಲು ಉದ್ದೇಶಿಸಲಾಗಿದೆ.
8. ರೈಲ್ವೇಸ್:
* 2019ರ ಆರ್ಥಿಕ ವರ್ಷದಲ್ಲಿ ರೈಲ್ವೇಯ ಕಾರ್ಯಾಚರಣಾ ಅನುಪಾತ ಶೇ.96.2ರಷ್ಟಿತ್ತು. *ಆರ್ಥಿಕ ವರ್ಷ 2020ರಲ್ಲಿ ರೈಲ್ವೇಯ ಬಂಡವಾಳ ವೆಚ್ಚ 1.6 ಲಕ್ಷ ಕೋಟಿ ಎಂದು ನಿರೀಕ್ಷಿಸಲಾಗಿದ್ದು ಇದು ನೂತನ ದಾಖಲೆಯಾಗಿದೆ.
* ಈಗ ದೇಶದಲ್ಲಿ ಬ್ರಾಡ್‌ಗೇಜ್ ರೈಲ್ವೇ ಹಳಿಯಲ್ಲಿ ಒಂದೇ ಒಂದು ಮಾನವರಹಿತ ರೈಲ್ವೇ ಕ್ರಾಸಿಂಗ್ ವ್ಯವಸ್ಥೆಯಿಲ್ಲ. *
9. ರಕ್ಷಣಾ ಬಜೆಟ್:
* ಸರಕಾರ ರಕ್ಷಣಾ ಕ್ಷೇತ್ರದ ಬಜೆಟ್ ಅನುದಾನವನ್ನು 3.05 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ. ಅಗತ್ಯಬಿದ್ದಾಗ ಸರಕಾರ ರಕ್ಷಣಾ ವಿಭಾಗಕ್ಕೆ ಹೆಚ್ಚುವರಿ ಅನುದಾನ ಒದಗಿಸಲಿದೆ.
* ಕಳೆದ ಕೆಲವು ವರ್ಷಗಳಲ್ಲಿ ಒಆರ್‌ಒಪಿ(ಸಮಾನಶ್ರೇಣಿ, ಸಮಾನ ಪಿಂಚಣಿ) ಯೋಜನೆಯಡಿ 35 ಸಾವಿರ ಕೋಟಿ ರೂ. ಒದಗಿಸಲಾಗಿದೆ.
10: ಗೋ ಕಲ್ಯಾಣ ಯೋಜನೆ:
* ಗೋ ಕಲ್ಯಾಣ ಯೋಜನೆಯಡಿ ‘ರಾಷ್ಟ್ರೀಯ ಕಾಮಧೇನು ಆಯೋಗ’ ಸ್ಥಾಪಿಸಲಾಗಿದ್ದು ಆರಂಭಿಕ ನಿಧಿಯಾಗಿ 500 ಕೋಟಿ ರೂ. ತೆಗೆದಿರಿಸಲಾಗಿದೆ. ಸರಕಾರ ಗೋಮಾತೆಯ ರಕ್ಷಣೆಯ ಕಾರ್ಯದಿಂದ ಹಿಂದಡಿ ಇಡುವುದಿಲ್ಲ ಎಂದು ಸಚಿವ ಗೋಯೆಲ್ ತಿಳಿಸಿದ್ದಾರೆ.