ದಿನಕ್ಕೆ 17 ರೂ. ನಿಗದಿ ರೈತರಿಗೆ ಅವಮಾನ: ಬಜೆಟ್ ವಿರುದ್ಧ ರಾಹುಲ್ ಕಿಡಿ

ಹೊಸದಿಲ್ಲಿ,ಫೆ.1: ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರ ರೈತರ ಬದುಕನ್ನು ಸರ್ವನಾಶಗೊಳಿಸಿದೆ. ಇದೀಗ ಮಧ್ಯಂತರ ಬಜೆಟ್‌ನಲ್ಲಿ ರೈತರಿಗೆ ಪ್ರತಿದಿನ 17 ರೂ. ನೀಡುವುದಾಗಿ ಘೋಷಿಸಿರುವುದು ಅವರಿಗೆ ಮಾಡಿದ ಅವಮಾನ ಎಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವ ಪಿಯೂಶ್ ಗೋಯಲ್ ರೈತರಿಗೆ ದಿನಕ್ಕೆ 16.44 ರೂ.ನಂತೆ ವಾರ್ಷಿಕ 6,000 ರೂ. ನೀಡಲಾಗುವುದು ಎಂದು ತಿಳಿಸಿದ್ದರು. ಈ ಮೊತ್ತವನ್ನು ಕೇಂದ್ರ ಸರಕಾರದ ಯೋಜನೆಯಡಿ ಮೂರು ಕಂತುಗಳಲ್ಲಿ ನೀಡಲಾಗುವುದು ಎಂದು ಅವರು ಹೇಳಿಕೊಂಡಿದ್ದರು. “ಮಾನ್ಯ ನಮೊ, ಐದು ವರ್ಷಗಳ ನಿಮ್ಮ ಅಸಮರ್ಥತೆ ಮತ್ತು ಅಹಂಕಾರ ರೈತರ ಜೀವನವನ್ನು ಸರ್ವನಾಶಗೊಳಿಸಿದೆ. ಇದೀಗ ಅವರಿಗೆ ಪ್ರತಿದಿನ 17 ರೂ. ನೀಡುತ್ತೇವೆ ಎಂದು ಹೇಳಿರುವುದು ರೈತರಿಗೆ ಮತ್ತು ಅವರು ಮಾಡುವ ಕೆಲಸಕ್ಕೆ ಮಾಡಿದ ಅವಮಾನ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Next Story





