ಮಧ್ಯಂತರ ಬಜೆಟ್: ಲಾಭ ಯಾರಿಗೆ ? ನಷ್ಟ ಯಾರಿಗೆ ?
ಇಲ್ಲಿದೆ ಸಂಪೂರ್ಣ ವಿವರ

ಹೊಸದಿಲ್ಲಿ,ಫೆ.1: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಶುಕ್ರವಾರ ಸಂಸತ್ತಿನಲ್ಲಿ ತನ್ನ ಮಧ್ಯಂತರ ಮುಂಗಡಪತ್ರವನ್ನು ಮಂಡಿಸಿದ್ದು,ಇದು ಸನ್ನಿಹಿತವಾಗಿರುವ ಸಾರ್ವತ್ರಿಕ ಚುನಾವಣೆಗಳ ಮುನ್ನ ಸರಕಾರದ ಜನಪ್ರಿಯತೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ.
ಕೃಷಿಕರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ್ ಯೋಜನಾದಂತಹ ಪ್ರಮುಖ ಪ್ರಕಟಣೆಗಳನ್ನು ಈ ಮುಂಗಡಪತ್ರ ಮಾಡಿದೆ. ಕೆಳ ಮಧ್ಯಮ ವರ್ಗಕ್ಕೆ ತೆರಿಗೆ ಪರಿಹಾರ ಸೇರಿದಂತೆ ಜನಪ್ರಿಯವಾಗಬಹುದಾದ ಕೆಲವು ಸಣ್ಣಪುಟ್ಟ ಕ್ರಮಗಳನ್ನೂ ಮುಂಗಡಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಅರುಣ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ವಿತ್ತಸಚಿವ ಪಿಯೂಷ್ ಗೋಯಲ್ ಅವರ ಮುಂಗಡಪತ್ರ ಭಾಷಣದ ಹೆಚ್ಚಿನ ಭಾಗ ಪ್ರತಿಪಕ್ಷಗಳ ಗೇಲಿಗಳ ನಡುವೆಯೇ ಕಳೆದ ನಾಲ್ಕೂವರೆ ವರ್ಷಗಳಲ್ಲಿಯ ಸರಕಾರದ ಯೋಜನೆಗಳ ಪ್ರಶಂಸೆಗೇ ಮೀಸಲಾಗಿತ್ತು.
ರೈತರು,ಗ್ರಾಮೀಣ ಭಾರತವನ್ನು ಪ್ರಮುಖ ಮಾರುಕಟ್ಟೆಯಾಗಿ ಹೊಂದಿರುವ ಕಂಪನಿಗಳು ಮತ್ತು ಮಧ್ಯಮವರ್ಗದ ತೆರಿಗೆದಾರರು ದೇಶವು ವಿತ್ತೀಯ ಕೊರತೆಯನ್ನು ಅನುಭವಿಸುತ್ತಿದ್ದರೂ ಮುಂಗಡಪತ್ರ ಪ್ರಸ್ತಾವನೆಗಳಿಂದ ಹೆಚ್ಚಿನ ಲಾಭಗಳನ್ನು ಪಡೆಯಲಿದ್ದಾರೆ. ಮಧ್ಯಂತರ ಬಜೆಟ್‌ನಿಂದ ಗೆದ್ದವರು ಮತ್ತು ಸೋತವರ ಸ್ಥೂಲ ಚಿತ್ರಣವಿಲ್ಲಿದೆ.....
ಗೆದ್ದವರು
►ಕೃಷಿಕರು: ನಿರೀಕ್ಷೆಯಂತೆಯೇ ಮೋದಿ ಸರಕಾರದ ಮಧ್ಯಂತರ ಮುಂಗಡಪತ್ರವು ದೇಶದ ಕೃಷಿಕರಿಗಾಗಿ ಬೃಹತ್ ವೆಚ್ಚದ ಯೋಜನೆಯನ್ನು ಹೊತ್ತುಕೊಂಡೇ ಬಂದಿದೆ. ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ಎಂದು ಹೆಸರಿಸಲಾಗಿರುವ ಕೃಷಿ ಆದಾಯ ಬೆಂಬಲ ಯೋಜನೆಗೆ ಮುಂಗಡಪತ್ರದಲ್ಲಿ 75,000 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ. ಎರಡು ಹೆಕ್ಟೇರ್‌ಗಳಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಕೃಷಿಕರು ವಾರ್ಷಿಕ 6,000 ರೂ.ಗಳನ್ನು ಪಡೆಯಲಿದ್ದಾರೆ.
ಈ ಯೋಜನೆಯಿಂದ ಸುಮಾರು 12 ಕೋಟಿ ಸಣ್ಣ ಮತ್ತು ಅತಿಸಣ್ಣ ರೈತರು ಲಾಭ ಪಡೆಯಲಿದ್ದಾರೆ ಎಂದು ಸರಕಾರವು ತಿಳಿಸಿದೆ. ಕೃಷಿಕ್ಷೇತ್ರವನ್ನು ಅವಲಂಬಿಸಿರುವ ಶಕ್ತಿ ಪಂಪ್ಸ್ ಇಂಡಿಯಾ,ಜೈನ್ ಇರಿಗೇಷನ್ ಸಿಸ್ಟಮ್ಸ್,ಕೆಎಸ್‌ಬಿ,ಕಿರ್ಲೋಸ್ಕರ್ ಬ್ರದರ್ಸ್,ಅವಂತಿ ಫೀಡ್ಸ್,ವಾಟರ್‌ಬೇಸ್,ಜೆಕೆ ಅಗ್ರಿ ಜೆನೆಟಿಕ್ಸ್ ಮತ್ತು ಪಿಐ ಇಂಡಸ್ಟ್ರೀಸ್‌ನಂತಹ ಕಂಪನಿಗಳಿಗೆ ಮುಂಗಡಪತ್ರದ ಲಾಭ ದೊರೆಯಲಿದೆ.
► ತೆರಿಗೆದಾರರು: ಐದು ಲ.ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವವರು ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ. 6.5 ಲ.ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವವರು ಆದಾಯ ತೆರಿಗೆ ಕಾಯ್ದೆಯಡಿ ಅರ್ಹ ಹೂಡಿಕೆಗಳಲ್ಲಿ 1.5 ಲ.ರೂ.ತೊಡಗಿಸಿದರೆ ಅವರಿಗೂ ತೆರಿಗೆ ಬಾಧ್ಯತೆಯಿಲ್ಲ. ಈ ಕ್ರಮದಿಂದಾಗಿ ಸುಮಾರು 30 ಲಕ್ಷ ಮಧ್ಯಮ ವರ್ಗದ ತೆರಿಗೆದಾರರಿಗೆ ಲಾಭವಾಗಲಿದೆ ಎಂದು ಗೋಯಲ್ ತನ್ನ ಭಾಷಣದಲ್ಲಿ ತಿಳಿಸಿದ್ದಾರೆ. ಈ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ಹಾಲಿ ದರಗಳಲ್ಲಿ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
► ಗ್ರಾಮೀಣ ಭಾರತ: ಪಶು ಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಹೆಚ್ಚಿನ ವೆಚ್ಚ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಬಡ್ಡಿ ಸಬ್ಸಿಡಿ ಯೋಜನೆ ಗ್ರಾಮೀಣ ಭಾರತವನ್ನು ಮುಖ್ಯ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿರುವ ಕಂಪನಿಗಳಿಗೆ ಲಾಭದಾಯಕವಾಗಲಿವೆ. ಮೋಟರ್ ಸೈಕಲ್ ತಯಾರಿಕೆ ಕಂಪನಿಗಳು ಹಾಗೂ ಮಹಿಂದ್ರಾ ಮತ್ತು ಮಹಿಂದ್ರಾ ಹಾಗೂ ಲಾರ್ಸನ್ ಆ್ಯಂಡ್ ಟುಬ್ರೋ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಿತಾಸಕ್ತಿಗಳನ್ನು ಹೊಂದಿರುವ ಇತರ ಕಂಪನಿಗಳು ಲಾಭ ಪಡೆಯಲಿವೆ.
► ಕಾರ್ಮಿಕರು: 15,000 ರೂ.ಗಿಂತ ಕಡಿಮೆ ಆದಾಯವುಳ್ಳ ಅಸಂಘಟಿತ ವಲಯಗಳಲ್ಲಿಯ ಕಾರ್ಮಿಕರಿಗಾಗಿ ಮೆಗಾ ಪಿಂಚಣಿ ಕಾರ್ಯಕ್ರಮ ‘ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ್ ಯೋಜನೆ ’ಯು ಮುಂಗಡಪತ್ರದಲ್ಲಿಯ ಎರಡನೇ ಪ್ರಮುಖ ಘೋಷಣೆಯಾಗಿದೆ. ಸಣ್ಣ ಉದ್ಯಮಗಳಲ್ಲಿ ದುಡಿಯುತ್ತಿರುವ,ಹೆಚ್ಚಿನ ಪ್ರಕರಣಗಳಲ್ಲಿ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳಿಲ್ಲದ ದೇಶದ ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಈ ಯೋಜನೆ ವರದಾನವಾಗಲಿದೆ.
► ರಿಯಲ್ ಎಸ್ಟೇಟ್: ಸರಕಾರವು ಮುಂಗಡಪತ್ರದಲ್ಲಿ ಅಗ್ಗದ ಬೆಲೆಗಳಲ್ಲಿ ಸೌಲಭ್ಯಕ್ಕೆ ಒತ್ತು ನೀಡಿದ ಮತ್ತು ಮನೆ ಖರೀದಿಯನ್ನು ಉತ್ತೇಜಿಸುವ ಕ್ರಮಗಳನ್ನು ಪ್ರಕಟಿಸಿದ ಬೆನ್ನಲ್ಲೇ ಬಾಂಬೆ ಶೇರು ವಿನಿಮಯ ಕೇಂದ್ರದ ರಿಯಲ್ ಎಸ್ಟೇಟ್ ಸೂಚ್ಯಂಕವು ಏರಿಕೆಯನ್ನು ದಾಖಲಿಸುವ ಮೂಲಕ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. 130 ಕೋ.ಜನಸಂಖ್ಯೆಯುಳ್ಳ ದೇಶದ ಪ್ರತಿಯೊಬ್ಬರಿಗೂ ಸ್ವಂತ ಮನೆಯ ಭರವಸೆ ನೀಡಿರುವ ಗೋಯಲ್,ಈಗಿನ ಒಂದು ಮನೆಗೆ ಹೋಲಿಸಿದರೆ ಎರಡು ಮನೆಗಳ ಖರೀದಿಗಾಗಿ ಬಂಡವಾಳ ಗಳಿಕೆಯಿಂದ ಎರಡು ಕೋ.ರೂ. ಹೂಡಿಕೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದ್ದಾರೆ. ಎರಡನೇ ಮನೆಯ ಸಾಂಕೇತಿಕ ಬಾಡಿಗೆಯ ಮೇಲಿನ ತೆರಿಗೆಯ ರದ್ದತಿಯನ್ನೂ ಅವರು ಪ್ರಸ್ತಾಪಿಸಿದ್ದಾರೆ. ಒಬೆರಾಯ್ ರಿಯಲ್ಟಿ,ಪ್ರೆಸ್ಟೀಜ್ ಎಸ್ಟೇಟ್ಸ್ ಮತ್ತು ಡಿಎಲ್‌ಎಫ್‌ನಂತಹ ಕಂಪನಿಗಳು ಈ ಪ್ರಸ್ತಾವಗಳ ಲಾಭ ಪಡೆಯಲಿವೆ.
► ವಾಹನ ತಯಾರಕರು: ಮಧ್ಯಂತರ ಮುಂಗಡಪತ್ರದ ಪ್ರಸ್ತಾವಗಳಿಗೆ ಬಿಎಸ್‌ಇ ವಾಹನ ಸೂಚ್ಯಂಕ ಶೇ.5.3ರಷ್ಟು ಜಿಗಿತ ದಾಖಲಿಸುವ ಮೂಲಕ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಇದು ಮೇ,2014ರ ನಂತರ ಸೂಚ್ಯಂಕದಲ್ಲಿ ಗರಿಷ್ಠ ಏರಿಕೆಯಾಗಿದೆ. ಮಾರುತಿ ಸುಝುಕಿ ಇಂಡಿಯಾ,ಹಿರೋ ಮೋಟೊಕಾರ್ಪ್ ಮತ್ತು ಬಜಾಜ್ ಆಟೊಗಳ ಶೇರುಗಳು ಸೂಚ್ಯಂಕ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಪ್ರಧಾನಿ ಮೋದಿ: ಮುಂಗಡಪತ್ರದಲ್ಲಿಯ ಎರಡು ಪ್ರಮುಖ ಘೋಷಣೆಗಳಾದ ಪಿಂಚಣಿ ಯೋಜನೆ ಮತ್ತು ಕೃಷಿ ಆದಾಯ ಬೆಂಬಲ ಯೋಜನೆ ಪ್ರಧಾನ ಮಂತ್ರಿಯ ಹೆಸರಿನಲ್ಲಿವೆ. ಕೃಷಿಕರಿಗಾಗಿ ಯೋಜನೆ ನಿರೀಕ್ಷಿತವಿದ್ದರೂ,ಮೆಗಾ ಪಿಂಚಣಿ ಯೋಜನೆಯನ್ನು ಯಾರೂ ಊಹಿಸಿರಲಿಲ್ಲ. ಇವೆರಡೂ ಯೋಜನೆಗಳು ಚುನಾವಣೆಗೆ ಮುನ್ನ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಹೆಚ್ಚಿಸಲು ನೆರವಾಗಲಿವೆ.
ಸೋತವರು
► ಬಾಂಡ್‌ಗಳನ್ನು ಹೊಂದಿರುವರು: ಬಜೆಟ್ ಕೊರತೆಯನ್ನು ಶೇ.3.4 ಎಂದು ಅಂದಾಜಿಸಲಾಗಿದ್ದು,ಮೋದಿ ಸರಕಾರವು ಎರಡನೇ ವರ್ಷವೂ ತನ್ನ ವಿತ್ತೀಯ ಕೊರತೆ ಗುರಿಯನ್ನು ಉಲ್ಲಂಘಿಸಲಿದೆ. ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಾದ ಮೂಡಿಸ್ ಅಥವಾ ಎಸ್‌ಆ್ಯಂಡ್‌ಪಿ ಭಾರತದ ಕ್ರೆಡಿಟ್ ರೇಟಿಂಗ್‌ನ್ನು ತಗ್ಗಿಸಿದರೆ ಬಾಂಡ್‌ಗಳನ್ನು ಹೊಂದಿರುವವರಿಗೆ ಹಿನ್ನಡೆಯಾಗಲಿದೆ. ಸರಕಾರದ ಮುಂಗಡಪತ್ರವು ಆದಾಯಗಳನ್ನು ಹೆಚ್ಚಿಸಲು ಯಾವುದೇ ನೂತನ ನೀತಿಗಳನ್ನು ಹೊಂದಿಲ್ಲ ಎಂದು ಮೂಡಿಸ್ ಈಗಾಗಲೇ ಹೇಳಿದೆ. 2019-20ನೇ ಸಾಲಿಗೆ ನಿರೀಕ್ಷೆಗಿಂತ ಹೆಚ್ಚಿನ ಸಾಲಗಳನ್ನು ಸರಕಾರವು ಪ್ರಸ್ತಾಪಿಸಿದ ಬಳಿಕ ಶೇರು ಮಾರುಕಟ್ಟೆಗಳಲ್ಲಿ ಸಾವರಿನ್ ಬಾಂಡ್‌ಗಳು ಕುಸಿತವನ್ನು ದಾಖಲಿಸಿದವು.
► ಕೃಷಿಕಾರ್ಮಿಕರು: ತಮ್ಮದೆನ್ನುವ ಭೂಮಿಯಿಲ್ಲದೆ ಇತರರ ಜಮೀನುಗಳಲ್ಲಿ ದುಡಿಯುತ್ತಿರುವ ಕೃಷಿಕಾರ್ಮಿಕರು ಕೃಷಿಕರಿಗಾಗಿ ಸರಕಾರವು ಘೋಷಿಸಿರುವ ಬೃಹತ್ ವೆಚ್ಚದ ಯೋಜನೆಯಿಂದ ಯಾವುದೇ ಲಾಭ ಪಡೆಯುವುದಿಲ್ಲ. ಈ ಕಾರ್ಮಿಕರು ಈಗಾಗಲೇ ಬಡತನದಿಂದ ಹತಾಶರಾಗಿದ್ದರೆ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯನ್ನು ಹೆಚ್ಚ್ಚಿಸುವ ಹೆಚ್ಚಿನ ಸರಕಾರಿ ಉಪಕ್ರಮಗಳು ಭೂಮಿ ಹೊಂದಿರುವ ಕೃಷಿಕರ ಬಗ್ಗೆಯೇ ಹೆಚ್ಚಿನ ಗಮನ ಹರಿಸುತ್ತಿವೆ.
► ರಕ್ಷಣೆ: ಡಾಲರ್‌ಗಳ ಲೆಕ್ಕದಲ್ಲಿ ಹೇಳುವುದಾದರೆ ದೇಶದ ರಕ್ಷಣಾ ವೆಚ್ಚವು ರೂಪಾಯಿ ಅಪಮೌಲ್ಯದಿಂದಾಗಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಈ ವರ್ಷದ ಮುಂಗಡಪತ್ರದಲ್ಲಿ ರಕ್ಷಣಾ ವೆಚ್ಚಕ್ಕಾಗಿ 3.05 ಲ.ಕೋ.ರೂ.ಗಳ ಅನುದಾನವನ್ನು ಮೀಸಲಿರಿಸಲಾಗಿದೆ. ಈ ಪೈಕಿ ಹೆಚ್ಚಿನ ಭಾಗ ಆವರ್ತನ ವೆಚ್ಚಗಳಿಗೆ ಹೋಗಲಿದ್ದು,ನೂತನ ರಕ್ಷಣಾ ಉಪಕರಣಗಳ ಖರೀದಿಗೆ ವೆಚ್ಚವು ಕಡಿಮೆಯಾಗಲಿದೆ.







