ಕೃಷ್ಣಪವನ್ ಕುಮಾರ್‌ಗೆ ‘ರಾಗಧನ ಪಲ್ಲವಿ’ ಪ್ರಶಸ್ತಿ ಪ್ರದಾನ

ಉಡುಪಿ, ಫೆ.1: ಉಡುಪಿ ರಾಗಧನ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ 31ನೆ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವವನ್ನು ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ಆಯೋಜಿಸಲಾಗಿತ್ತು.
ಕಲಾವಿಹಾರಿ ಎ.ಈಶ್ವರಯ್ಯ ಅವರಿಗೆ ಅರ್ಪಿಸಿರುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ. ವಿಜಯ್ ಮಾತನಾಡಿ, ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹ ಆಗಿದ್ದು, ಇಂದು ರಾಗಧನದಂತಹ ಸಂಸ್ಥೆಗಳು ಈ ಸಂಗೀತವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತಿದೆ ಎಂದರು.
ಹಿರಿಯ ವಿದ್ವಾಂಸ ಡಾ.ಯು.ಪಿ.ಉಪಾಧ್ಯಾಯ ಮಾತನಾಡಿ, ಸಂಗೀತದಷ್ಟೆ ಶ್ರೇಷ್ಠವಾದುದು ಸಾಹಿತ್ಯ. ಸಂಗೀತದ ಯೋಗ್ಯತೆಯನ್ನು ವರೆಗೈ ಹಚ್ಚುವುದು ಪಲ್ಲವಿಯಾಗಿದೆ. ಸಂಗೀತದಲ್ಲಿ ಪಲ್ಲವಿಯು ಸಾಹಿತ್ಯ ಕ್ಷೇತ್ರದಲ್ಲಿ ಮಹಾಕಾವ್ಯ ಇದ್ದಂತೆ. ಕರಾವಳಿ ಜಿಲ್ಲೆಗಳಿಗೆ ಸಂಗೀತ ತುಂಬಾ ವಿಳಂಬವಾಗಿ ಪ್ರವೇಶ ಪಡೆ ದಿದ್ದರೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಸಂಗೀತ ಕ್ಷೇತ್ರಕ್ಕೆ ಬರು ತ್ತಿದ್ದಾರೆ. ಅಲ್ಲದೆ ಅದರ ಗುಣಮಟ್ಟ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಸುಶೀಲಾ ಉಪಾಧ್ಯಾಯ ಸಂಸ್ಮರಣಾರ್ಥ ಡಾ. ಯು.ಪಿ.ಉಪಾಧ್ಯಾಯ ಪ್ರಾಯೋಜಿಸಿರುವ ‘ರಾಗಧನ ಪಲ್ಲವಿ’ ಪ್ರಶಸ್ತಿಯನ್ನು ಮಂಗಳೂರಿನ ಕೊಳಲು ವಾದಕ ಕೃಷ್ಣ ಪವನ್ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಅಂಬಲಪಾಡಿ ಸರಿಗಮ ಸಂಗೀತ ಶಾಲೆಯ ಸಂಗೀತ ವಿದುಷಿ ವಾರಿಜಾಕ್ಷಿ ಆರ್.ಎಲ್.ಭಟ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಪ್ರಶಸ್ತಿ ಪ್ರದಾನ ಮಾಡಿದರು. ರಾಗಧನ ಉಪಾಧ್ಯಕ್ಷ ಡಾ.ಶ್ರೀಕಿರಣ್ ಹೆಬ್ಬಾರ್ ಸ್ವಾಗತಿಸಿದರು. ವಾಸುದೇವ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಉಮಾಶಂಕರಿ ಟಿ.ಕೆ. ವಂದಿಸಿದರು. ಕೋಶಾಧಿಕಾರಿ ಕೆ.ಸದಾ ಶಿ ರಾವ್ ಕಾರ್ಯಕ್ರಮ ನಿರೂಪಿಸಿದರು.







