ವಾಹನ, ಸಭಾಂಗಣ ಮಾಲಕರ ವಿರುದ್ಧ ಕಠಿಣ ಕ್ರಮ: ಪೊಲೀಸ್ ಆಯುಕ್ತರ ಎಚ್ಚರಿಕೆ
ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮದಿಂದ ಸಂಚಾರಕ್ಕೆ ಅಡ್ಡಿ

ಮಂಗಳೂರು, ಫೆ.1: ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮ ನಡೆಯುವ ಸಂದರ್ಭ ರಸ್ತೆಗಳಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುವ ವಾಹನ ಮತ್ತು ಸಭಾಂಗಣಗಳ ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇದು ಮುಂದುವರಿದರೆ ಸಂಬಂಧಪಟ್ಟ ಹಾಲ್ ಗಳ ಟ್ರೇಡ್ ಲೈಸನ್ಸ್‌ಗಳ ರದ್ದು ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಎಚ್ಚರಿಸಿದರು.
ಶುಕ್ರವಾರ ನಡೆದ ಪೋಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಕಲ್ಲಾಪುವಿನ ಯುನಿಟಿ ಹಾಲ್ ಮತ್ತದರ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಮದುವೆ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಪಾರ್ಕ್ ಮಾಡಿದ್ದರಿಂದ ಗಂಟೆಗಟ್ಟಲೆ ರಾ.ಹೆ.66ರಲ್ಲಿ ವಾಹನಗಳು ಸಿಲುಕಿಕೊಂಡು ಮಕ್ಕಳು, ಮಹಿಳೆಯರು ತೊಂದರೆ ಅನುಭವಿಸಿದ್ದಾರೆ ಎಂದು ಸಾರ್ವಜನಿಕರು ಅಹವಾಲು ತೋಡಿಕೊಂಡರು.
ಕ್ರಿಮಿನಲ್ ಕೇಸು: ಬುಧವಾರ ಯುನಿಟಿ ಹಾಲ್ ಸಮೀಪ ಉಂಟಾದ ರಸ್ತೆ ತಡೆಗೆ ಸಂಬಂಧಿಸಿ ಹಾಲ್‌ನ ಮಾಲಕರ ವಿರುದ್ಧ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 283ರ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಹಾಗೂ ನೊಟೀಸ್ ಜಾರಿ ಮಾಡಲಾಗಿದೆ. ಟ್ರೇಡ್ ಲೈಸನ್ಸ್ ರದ್ದತಿಗಾಗಿ ಉಳ್ಳಾಲ ಪುರಸಭೆಗೆ ಪತ್ರ ಬರೆದು ಶಿಾರಸು ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಯುನಿಟಿ ಹಾಲ್ ಪಕ್ಕದಲ್ಲಿ ರಸ್ತೆ ಬ್ಲಾಕ್ ಆದಾಗ ಉಳ್ಳಾಲ ಪೊಲೀಸ್ ಠಾಣೆಗೆ ೆನ್ ಮಾಡಿದರೆ ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ನಾಗರಿಕರೊಬ್ಬರು ಹೇಳಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಅಂತಹ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ ಕೆಲವು ಸಿಟಿ ಬಸ್‌ಗಳ ಫುಟ್‌ಬೋರ್ಡ್ ಎತ್ತರವಿದ್ದು, ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಹತ್ತಿ ಇಳಿಯಲು ಕಷ್ಟವಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಫುಟ್‌ಬೋರ್ಡ್ ಬಗ್ಗೆ ಫಿಟ್‌ನೆಸ್ ಸರ್ಟಿಫಿಕೆಟ್‌ಗೆ ಹೋಗುವ ವೇಳೆ ಆರ್‌ಟಿಒ ಕಚೇರಿಗೆ ಹೋಗುವ ಸಂದರ್ಭದಲ್ಲಿ ಸರಿಪಡಿಸಲು ಸೂಚನೆ ನೀಡಿದರು.
ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡಾ ಆಟೊ ರಿಕ್ಷಾ ವ್ಯವಸ್ಥೆ ಬೆಳಗ್ಗಿನ ಹೊತ್ತು ಮತ್ತು ರಾತ್ರಿ ವೇಳೆ ಇರುವುದಿಲ್ಲ. ರಿಕ್ಷಾ ಚಾಲಕರು ಜನರಿಂದ ಅಧಿಕ ಬಾಡಿಗೆ ದರ ವಸೂಲು ಮಾಡುತ್ತಿದ್ದಾರೆ ಎಂದು ನಾಗರಿಕರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಹೆಚ್ಚುವರಿ ಬಾಡಿಗೆ ವಸೂಲು ಮಾಡಿದರೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ದೂರು ಕೊಡಿ ಎಂದರು.
ಇದು 104 ನೇ ಫೊನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 30 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ್ ಶೆಟ್ಟಿ ಮತ್ತು ಶ್ರೀನಿವಾಸ ಗೌಡ, ಇನ್‌ಸ್ಪೆಕ್ಟರ್‌ಗಳಾದ ಶಿವ ಪ್ರಕಾಶ್, ಅಮಾನುಲ್ಲಾ, ಗುರುದತ್ತ ಕಾಮತ್, ಪಿಎಸ್‌ಐ ಕಮಲಾ,ಎಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.








