ನಕಲಿ ವಿವಿ ಹಗರಣ: 130 ವಿದ್ಯಾರ್ಥಿಗಳ ಬಂಧನ; ಹಲವರ ಗಡಿಪಾರು ಸಾಧ್ಯತೆ
ವಾಶಿಂಗ್ಟನ್, ಫೆ. 1: ನಕಲಿ ವಿಶ್ವವಿದ್ಯಾನಿಲಯವೊಂದನ್ನು ಬಳಸಿ ನಡೆಸಲಾದ ಕುಟುಕು ಕಾರ್ಯಾಚರಣೆಯಲ್ಲಿ, ‘ಅಮೆರಿಕದಲ್ಲಿ ವಾಸಿಸುವುದಕ್ಕಾಗಿ ಹಣ ನೀಡಿದ’ ಆರೋಪದಲ್ಲಿ ಈವರೆಗೆ 130 ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಅವರು ಕೇವಲ ಸಿವಿಲ್ ವಲಸೆ ಆರೋಪಗಳನ್ನು ಎದುರಿಸುತ್ತಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
‘‘ನಾವು ನಾಗರಿಕ ವಲಸೆ ಆರೋಪಗಳ ಅಡಿಯಲ್ಲಿ 130 ವಿದೇಶಿಯರನ್ನು ಬಂಧಿಸಿದ್ದೇವೆ’’ ಎಂದು ವಲಸೆ ಮತ್ತು ಸುಂಕ ಜಾರಿ (ಐಸಿಇ) ಇಲಾಖೆಯ ವಕ್ತಾರೆ ಕ್ಯಾರಿಸಾ ಕಟ್ರಲ್ ಹೇಳಿರುವುದಾಗಿ ‘ಡೆಟ್ರಾಯಿಟ್ ಫ್ರೀ ಪ್ರೆಸ್’ ಗುರುವಾರ ಹೇಳಿದರು.
ಇನ್ನೂ ಹೆಚ್ಚಿನ ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಇದು ನೈಜ ವಿಶ್ವವಿದ್ಯಾನಿಲಯವಲ್ಲ ಎಂದು ಗೊತ್ತಿದ್ದೂ ಹಗರಣದಲ್ಲಿ ಶಾಮೀಲಾದ ವಿದ್ಯಾರ್ಥಿಗಳು ಗಡಿಪಾರನ್ನು ಎದುರಿಸುತ್ತಿದ್ದಾರೆ.
ವಿದ್ಯಾರ್ಥಿಗಳ ನೇಮಕಾತಿದಾರರಾಗಿ ಹಗರಣವನ್ನು ನಡೆಸಿದರೆನ್ನಲಾದ 8 ಮಂದಿ ವೀಸಾ ವಂಚನೆ ಹಾಗೂ ಹಣ ಗಳಿಕೆಗಾಗಿ ವಿದೇಶಿಯರಿಗೆ ಆಶ್ರಯ ನೀಡಿದ ಪಿತೂರಿಗೆ ಸಂಬಂಧಿಸಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಗರಿಷ್ಠ 5 ವರ್ಷಗಳ ಸೆರೆವಾಸ ಶಿಕ್ಷೆಗೆ ಗುರಿಯಾಗಬಹುದಾಗಿದೆ.
ವಿದ್ಯಾರ್ಥಿ ವೀಸಾ ವಂಚನೆಯನ್ನು ಪತ್ತೆಹಚ್ಚುವ ಕುಟುಕು ಕಾರ್ಯಾಚರಣೆಗಾಗಿ ವಲಸೆ ವಿಭಾಗದ ಅಧಿಕಾರಿಗಳು ಸ್ಥಾಪಿಸಿದ ನಕಲಿ ಸಂಸ್ಥೆ ‘ಯುನಿವರ್ಸಿಟಿ ಆಫ್ ಫಾರ್ಮಿಂಗ್ಟನ್’ನಲ್ಲಿ 600ರಷ್ಟು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಫೆಡರಲ್ ಪ್ರಾಸಿಕ್ಯೂಟರ್ಗಳು ನ್ಯಾಯಾಲಯದಲ್ಲಿ ಸಲ್ಲಿಸಿದ ದಾಖಲೆಗಳು ಹೇಳಿವೆ.
ತರಗತಿಗಳಿಗೆ ಹಾಜರಾಗದೆ ದಾಖಲೆ ಪಡೆಯುತ್ತಿದ್ದರು!
ಪ್ರಾಸಿಕ್ಯೂಟರ್ಗಳು ಇದನ್ನು ‘ವಾಸ್ತವ್ಯಕ್ಕಾಗಿ ಹಣ ನೀಡುವ’ ಹಗರಣ ಎಂಬುದಾಗಿ ಬಣ್ಣಿಸಿದ್ದಾರೆ. ತರಗತಿಗಳಿಗೆ ಹಾಜರಾಗದೆ ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕದಲ್ಲಿ ವಾಸ್ತವ್ಯ ಹೂಡುವುದಕ್ಕಾಗಿ ನಕಲಿ ವಿಶ್ವವಿದ್ಯಾನಿಲಯದಿಂದ ದಾಖಲೆಗಳನ್ನು ಪಡೆಯಲು ವಿದ್ಯಾರ್ಥಿಗಳು ನೇಮಕಾತಿದಾರರಿಗೆ ಹಣ ನೀಡುತ್ತಿದ್ದರು.
ನೇಮಕಾತಿದಾರರು ಓರ್ವ ವಿದ್ಯಾರ್ಥಿಗೆ 5,000 ಡಾಲರ್ (ಸುಮಾರು 3.56 ಲಕ್ಷ ರೂಪಾಯಿ)ನಿಂದ 20,000 ಡಾಲರ್ (ಸುಮಾರು 14.26 ಲಕ್ಷ ರೂಪಾಯಿ)ವರೆಗೆ ಹಣ ಪಡೆಯುತ್ತಿದ್ದರು ಎಂಬುದನ್ನು ನ್ಯಾಯಾಲಯದ ದಾಖಲೆಗಳು ಹೇಳುತ್ತವೆ.