ಬಜರಂಗದಳ ಗೂಂಡಾಗಳಿಂದ ವೃದ್ಧೆಯರಿಗೆ ಹಲ್ಲೆ : ವಿಮ್ ಖಂಡನೆ
ಮಂಗಳೂರು, ಫೆ.1: ಸಕಲೇಶಪುರದ ಎಪಿಎಂಸಿ ಸಂತೆಯಲ್ಲಿ ದನದ ಮಾಂಸದ ಆಹಾರ ಮಾರಾಟದ ಆರೋಪವನ್ನು ಹೊರಿಸಿ ಬಜರಂಗದಳ ಗೂಂಡಾಗಳು 70ರ ಹರೆಯದ ವೃದ್ಧೆಯರ ಮೇಲೆ ಹಲ್ಲೆ ನಡೆಸಿ ಹಾಗೂ ಪ್ರಾಣ ಬೆದರಿಕೆ ಒಡ್ಡಿರುವುದನ್ನು ವುಮೆನ್ ಇಂಡಿಯಾ ಮೂವ್‌ಮೆಂಟ್ (ವಿಮ್) ಕರ್ನಾಟಕ ಕಟುವಾಗಿ ಖಂಡಿಸಿದೆ.
ಸುಮಾರು 40 ವರ್ಷಗಳಿಂದ ಸಂತೆ ಮೈದಾನದಲ್ಲಿ ಸಣ್ಣದಾದ ಟೆಂಟ್ ಹಾಕಿ ಮಾಂಸದ ಆಹಾರ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಈ ಇಬ್ಬರು ವೃದ್ಧೆಯರ ಮೇಲೆ 8 ಮಂದಿಗಳಿಂದ ಬಜರಂಗದಳ ಗೂಂಡಾಗಳು ದನದ ಮಾಂಸದ ಅಡುಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಲ್ಲದೆ ಬಿಸಿ ಸಂಬಾರು ಪದಾರ್ಥವನ್ನು ಎರಚಿ ‘ಇನ್ನೊಮ್ಮೆ ಇಲ್ಲಿ ಮಾಂಸದ ಅಡುಗೆ ಮಾಡಿ ಮಾರಾಟ ಮಾಡಿದರೆ ನಿಮ್ಮನ್ನೇ ಸುಟ್ಟು ಹಾಕುತ್ತೇವೆ’ ಎಂದು ಪ್ರಾಣ ಬೆದರಿಕೆಯನ್ನು ಹಾಕಿದ್ದರೂ ಕೂಡ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದೆ ನ್ಯಾಯ ನಿರಾಕರಿಸಿದ್ದು ಅಮಾನವೀಯವಾಗಿದೆ.
ಈ ಘಟನೆಯು ಮಹಿಳೆಯರ ಮೇಲೆ ಫ್ಯಾಶಿಸ್ಟ್ ಶಕ್ತಿಗಳ ನಿರಂತರ ಹಲ್ಲೆಯನ್ನು ಎತ್ತಿ ತೋರಿಸುತ್ತದೆ. ಸರಕಾರ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ವೃದ್ಧೆಯರ ಮೇಲೆ ಹಲ್ಲೆಗೈದ ಮತ್ತು ಪ್ರಾಣ ಬೆದರಿಕೆಯನ್ನೊಡ್ಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವುಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಒತ್ತಾಯಿಸಿದ್ದಾರೆ.





