ಮಧ್ಯಂತರ ಬಜೆಟ್: ಕ್ರೀಡೆಗೆ 200 ಕೋಟಿ ರೂ.ಗೂ ಅಧಿಕ ಮೀಸಲು
ಹೊಸದಿಲ್ಲಿ,ಫೆ.1: ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದ ನಿಧಿಯಲ್ಲಿ ಹೆಚ್ಚಳ ಮತ್ತು ಕ್ರೀಡಾಳುಗಳಿಗೆ ಪ್ರೋತ್ಸಾಹಧನ ಏರಿಕೆಯೂ ಸೇರಿದಂತೆ 2019-20ರ ಮಧ್ಯಂತರ ಬಜೆಟ್‌ನಲ್ಲಿ ಕ್ರೀಡೆಗಾಗಿ ಕೇಂದ್ರ ಸರಕಾರ 214.20 ಕೋಟಿ ರೂ. ಏರಿಕೆ ಮಾಡಿದೆ.
ವಿತ್ತ ಸಚಿವ ಪಿಯೂಶ್ ಗೋಯಲ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ 2019-20ರ ಸಾಲಿನ ಕ್ರೀಡಾ ಬಜೆಟನ್ನು 2002.72 ಕೋಟಿ ರೂ.ನಿಂದ 2216.92 ಕೋಟಿ ರೂ.ಗೆ ಏರಿಸಲಾಗಿದೆ. ಈ ಬಜೆಟ್‌ನಿಂದ ಅತೀಹೆಚ್ಚು ಲಾಭಗಳಿಸಿದವರೆಂದರೆ ಭಾರತೀಯ ಕ್ರೀಡಾ ಪ್ರಾಧಿಕಾರ, ರಾಷ್ಟ್ರೀಯ ಕ್ರೀಡೆ ಅಭಿವೃದ್ಧಿ ನಿಧಿ ಮತ್ತು ಕ್ರೀಡಾಪಟುಗಳ ಪ್ರೋತ್ಸಾಹಧನಕ್ಕಾಗಿ ಮೀಸಲಿಟ್ಟ ನಿಧಿ. ಎಸ್‌ಎಐ ಅನುದಾನವನ್ನು 55 ಕೋಟಿ ರೂ.ನಷ್ಟು ಹೆಚ್ಚಿಸಿ 393 ಕೋಟಿ ರೂ.ನಿಂದ 450 ಕೋಟಿ ರೂ.ಗೆ ಏರಿಸಲಾಗಿದೆ. ರಾಷ್ಟ್ರೀಯ ಶಿಬಿರಗಳನ್ನು ವ್ಯವಸ್ಥಾಪಿಸಲು ಇರುವ ನೋಡಲ್ ಸಂಸ್ಥೆಯಾಗಿರುವ ಎಸ್‌ಎಐ ಕ್ರೀಡಾಪಟುಗಳಿಗೆ ಕ್ರೀಡಾ ಸಾಧನಗಳು ಮತ್ತು ಇತರ ಪರಿಕರಗಳನ್ನು ಒದಗಿಸುತ್ತದೆ. ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹಧನ ನಿಧಿಯನ್ನು 63 ಕೋಟಿ ರೂ.ನಿಂದ 89 ಕೋಟಿ ರೂ.ಗೆ ಏರಿಸುವ ಪ್ರಸ್ತಾವವನ್ನು ವಿತ್ತ ಸಚಿವರು ಮುಂದಿಟ್ಟಿದ್ದಾರೆ. ಜೊತೆಗೆ ಎನ್‌ಎಸ್‌ಡಿಎಫ್‌ಗೆ ನೀಡುವ ಮೊತ್ತವನ್ನು ಎರಡು ಕೋಟಿ ರೂ. ಹೆಚ್ಚಿಸಿ 70 ಕೋಟಿ ರೂ.ಗೆ ಏರಿಸಲಾಗಿದೆ. ಕ್ರೀಡಾಪಟುಗಳಿಗೆ ಒಟ್ಟಾರೆ ಪ್ರೋತ್ಸಾಹಧನ ಮತ್ತು ಪ್ರಶಸ್ತಿಗಳ ಮೊತ್ತವನ್ನು 94.07 ಕೋಟಿ ರೂ.ನಷ್ಟು ಹೆಚ್ಚಿಸಿ 316.93 ಕೋಟಿ ರೂ.ನಿಂದ 411 ಕೋಟಿ ರೂ.ಗೆ ಏರಿಸಲಾಗಿದೆ. ಕ್ರೀಡೆಗಳ ಅಭಿವೃದ್ಧಿಗೆ ರೂಪಿಸಲಾಗಿರುವ ಖೇಲೊ ಇಂಡಿಯಾ ಯೋಜನೆಗೆ ನಿಗದಿಪಡಿಸಲಾದ ನಿಧಿಯನ್ನು 50.31 ಕೋಟಿ ರೂ. ಹೆಚ್ಚಿಸಿ 550.69 ಕೋಟಿ ರೂ.ನಿಂದ 601 ಕೋಟಿ ರೂ.ಗೆ ಏರಿಸಲಾಗಿದೆ.