ಕಾಂಗ್ರೆಸ್ ಮುಖಂಡರ ಸಲಹೆಯಂತೆ ಮುಂದಿನ ತೀರ್ಮಾನ: ಸುಮಲತಾ ಅಂಬರೀಶ್
ಚುನಾವಣೆಯಲ್ಲಿ ಸ್ಪರ್ಧೆ ವಿಚಾರ

ಬೆಂಗಳೂರು, ಫೆ.1: ರಾಜಕೀಯ ಅನ್ನೋದು ಅಷ್ಟು ಸುಲಭದ ವಿಷಯವಲ್ಲ. ಈ ವಿಚಾರದ ಬಗ್ಗೆ ನಾನು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಂಬರೀಶ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಆದುದರಿಂದ, ಕಾಂಗ್ರೆಸ್ ಮುಖಂಡರ ಸಲಹೆಯನ್ನು ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹಿರಿಯ ನಟಿ ಸುಮಲತಾ ಅಂಬರೀಶ್ ಹೇಳಿದರು.
ಶುಕ್ರವಾರ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಂಬರೀಶ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಡೆದ ಸಮಾಲೋಚನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಂಬರೀಶ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಹಾಗೂ ಅವರ ಸಂಬಂಧ ಮುಂದುವರೆಯಬೇಕೆಂಬುದು ಅಭಿಮಾನಿಗಳ ಆಸೆ. ಈ ಜನ ಅಂಬರೀಶ್ ಸಂಪಾದಿಸಿದ ಆಸ್ತಿ. ಅದನ್ನು ಕಳೆದುಕೊಳ್ಳುವುದಕ್ಕೆ ನಮಗೆ ಇಷ್ಟವಿಲ್ಲ. ಈ ಸಂದರ್ಭದಲ್ಲಿ ನನಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಸುಮಲತಾ ತಿಳಿಸಿದರು.
ಕಳೆದ ಎರಡು ತಿಂಗಳಿನಿಂದ ಜನ ಮನೆಗೆ ಬರುತ್ತಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಬರುವಂತೆ ಒತ್ತಡ ಹೇರುತ್ತಲೇ ಇದ್ದಾರೆ. ರಾಜಕೀಯಕ್ಕೆ ಬರಬೇಕು ಎನ್ನುವ ಆಸೆ ನನಗಿಲ್ಲ. ಆದರೆ, ಮಂಡ್ಯ ಜಿಲ್ಲೆಯ ಜನರ ಭಾವನೆಗಳಿಗೆ ಗೌರವ ಕೊಡಬೇಕು. ಈಗ ನಾನು ಯೋಚನೆ ಮಾಡಬೇಕಿದೆ ಎಂದು ಅವರು ಹೇಳಿದರು.
ನಮ್ಮದು ಕಾಂಗ್ರೆಸ್ ಪಕ್ಷ. ಪಕ್ಷದಲ್ಲಿ ಹಿರಿಯ ನಾಯಕರು, ಮುಖಂಡರು ಇದ್ದಾರೆ. ಅವರ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕು. ಎಲ್ಲರ ಸಲಹೆಯನ್ನು ಕೇಳಿ ಒಂದು ತೀರ್ಮಾನ ಪ್ರಕಟಿಸುತ್ತೇನೆ ಎಂದು ಸುಮಲತಾ ತಿಳಿಸಿದರು.







