ಮಧ್ಯಂತರ ಬಜೆಟ್‌ನಲ್ಲಿ ರೈತರಿಗೆ ವಂಚನೆ: ಕಿಸಾನ್ ಸಭಾ
“ಬೆಂಬಲ ಬೆಲೆ, ಸಾಲಮನ್ನಾ ಬೇಡಿಕೆಗಳಿಂದ ಪಾರಾಗಲು 6,000 ರೂ.”

ಹೊಸದಿಲ್ಲಿ,ಫೆ.1: ಶುಕ್ರವಾರ ಕೇಂದ್ರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ. ನಗದು ನೀಡುವ ಪ್ರಸ್ತಾವನೆಯನ್ನು ಟೀಕಿಸಿರುವ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್), ತಮ್ಮ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡುವ ಮತ್ತು ಸಂಪೂರ್ಣ ಸಾಲಮನ್ನಾ ಮಾಡುವಂಥ ರೈತರ ಪ್ರಮುಖ ಬೇಡಿಕೆಗಳಿಂದ ತಪ್ಪಿಸಿಕೊಳ್ಳಲು ಈ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದೆ.
ಮಾಸಿಕ 500 ರೂ. ಅಥವಾ ದಿನಕ್ಕೆ 15 ರೂ. ನೀಡುವುದು ಭಾರತದ ರೈತರಿಗೆ ಮಾಡಿದ ವಂಚನೆ. 15 ರೂ.ಗೆ ಒಂದು ಲೋಟ ಚಹಾ ಸಿಗುತ್ತದೆ. ಅದಕ್ಕೂ ಮಿಗಿಲಾಗಿ, ಸಂಪೂರ್ಣ ಸಾಲಮನ್ನಾ ಮಾಡಬೇಕು ಮತ್ತು ಕೃಷಿ ಬೆಳೆಗಳಿಗೆ ವೆಚ್ಚದ 1.5ಪಟ್ಟು ದರವನ್ನು ನೀಡಬೇಕು ಎಂಬ ರೈತರ ಹಲವು ವರ್ಷಗಳ ಬೇಡಿಕೆಯಿಂದ ತಪ್ಪಿಸಿಕೊಳ್ಳಲು ಈ ಘೋಷಣೆಯನ್ನು ಮಾಡಲಾಗಿದೆ ಎಂದು ಎಐಕೆಎಸ್‌ನ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ಧವಳೆ ತಿಳಿಸಿದ್ದಾರೆ.
ಈ ಭರವಸೆಯನ್ನು ಸರಕಾರ 2014ರಲ್ಲೇ ನೀಡಿತ್ತು. ಆದರೆ ಐದು ವರ್ಷ ಕಳೆದರೂ ಅದು ಇನ್ನೂ ಈಡೇರಿಲ್ಲ. ಸದ್ಯ ಇದು ಚುನಾವಣೆಯ ಮೊದಲ ಜುಮ್ಲಾ ಆಗಿದೆ. ಆದರೆ ಕೃಷಿಕ ಸಮುದಾಯ ಈ ಸುಳ್ಳು ಭರವಸೆಯನ್ನು ನಂಬುವುದಿಲ್ಲ, ಬದಲಿಗೆ ಅವರು ಈ ಅವಮಾನದಿಂದ ಬಹಳ ಕೋಪಗೊಂಡಿದ್ದಾರೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಧವಳೆ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯ ನೇತೃತ್ವವಹಿಸಿರುವ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್, ಈ ಬಜೆಟ್ ಕೃಷಿಯ ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳಿಗೆ ಮತ್ತು ದೇಶದ ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಿಲ್ಲ ಎಂದು ದೂರಿದ್ದಾರೆ. ಬಜೆಟ್‌ನಲ್ಲಿ ನಿಧಿ ಮೀಸಲಿಟ್ಟಿರುವುದು ಚುನಾವಣೆಗೂ ಮುನ್ನ ರೈತರನ್ನು ಖರೀದಿಸುವ ಹತಾಶ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.







