ಪೊಲೀಸರ ವಿಚಾರಣೆಗೆ ಬೇಸತ್ತು ರವಿ ಪೂಜಾರಿ ತಂದೆತಾಯಿ ಮಲ್ಪೆ ಊರನ್ನೇ ತ್ಯಜಿಸಿದ್ದರು !

ಉಡುಪಿ, ಫೆ.1: ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿತರಾಗಿ ದ್ದಾರೆನ್ನಲಾದ ಭೂಗತ ಪಾತಕಿ ರವಿ ಪೂಜಾರಿ(58) ಮೂಲತಃ ಮಲ್ಪೆಯ ವಡಬಾಂಡೇಶ್ವರದವನಾಗಿದ್ದು, ಮಗನ ಅಪರಾಧ ಕೃತ್ಯಗಳಿಗೆ ಪೊಲೀಸರಿಂದ ಪದೇ ಪದೇ ವಿಚಾರಣೆ ಎದುರಿಸಬೇಕಾದ ಪರಿಸ್ಥಿತಿಯಿಂದ ಬೇಸತ್ತ ತಂದೆ ತಾಯಿ ಸುಮಾರು 12 ವರ್ಷಗಳ ಹಿಂದೆಯೇ ಮಲ್ಪೆಯ ಮನೆಯನ್ನು ತ್ಯಜಿಸಿ ಹೋಗಿದ್ದರು.
ವಡಬಾಂಡೇಶ್ವರ ನೆರ್ಗಿ ಸರಸ್ವತಿ ಭಜನಾ ಮಂದಿರ ಬಳಿಯ ನಿವಾಸಿ ಸೂರ್ಯ ಪೂಜಾರಿ ಹಾಗೂ ಸುಶೀಲಾ ಪೂಜಾರಿ ದಂಪತಿಯ ಐವರು ಮಕ್ಕಳಲ್ಲಿ ರವಿ ಪೂಜಾರಿ ಎರಡನೆಯವ. ಈತನಿಗೆ ಓರ್ವ ಅಕ್ಕ, ಓರ್ವ ತಂಗಿ ಹಾಗೂ ಇಬ್ಬರು ತಮ್ಮಂದಿರು. ಇವರಲ್ಲಿ ತಮ್ಮ ಮಧು ಪೂಜಾರಿ ಎಂಬವರು ಮೃತ ಪಟ್ಟಿದ್ದಾರೆ.
ಮುಂಬೈಯ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದ ಸೂರ್ಯ ಪೂಜಾರಿ ನಿವೃತ್ತರಾದ ಬಳಿಕ ಮಲ್ಪೆಯ ಮನೆಯಲ್ಲಿ ಬಂದು ನೆಲೆಸಿದ್ದರು. ರವಿ ಪೂಜಾರಿ ಮಲ್ಪೆಯಲ್ಲಿ ಹುಟ್ಟಿದ್ದರೂ ಬೆಳೆದದ್ದು ಹಾಗೂ ಶಾಲೆಗೆ ಹೋಗಿರುವುದು ಮಾತ್ರ ಮುಂಬೈ ಯಲ್ಲಿ. ಮುಂಬೈಯಲ್ಲಿ ಅಪರಾಧ ಲೋಕದಲ್ಲಿ ತೊಡಗಿಸಿಕೊಂಡಿದ್ದ ರವಿ ಪೂಜಾರಿ ಊರಿಗೆ ಆಗಾಗ ಬಂದು ಹೋಗುತ್ತಿದ್ದನು.
ರವಿ ಪೂಜಾರಿ 1990-92ರ ಅವಧಿಯಲ್ಲಿ ಮಲ್ಪೆಯಲ್ಲಿ ನಡೆದ ತನ್ನ ಅಕ್ಕನ ಮದುವೆಯಲ್ಲಿ ಪಾಲ್ಗೊಂಡಿದ್ದು, ಇದು ಆತ ಊರಿಗೆ ನೀಡಿದ ಕೊನೆಯ ಭೇಟಿಯಾಗಿದೆ. ಈ ಅವಧಿಯಲ್ಲಿ ಆತನಿಗೆ ಸುಮಾರು 28 ವರ್ಷ ವಯಸ್ಸಾ ಗಿತ್ತು. ಅದೇ ಸಮಯದಲ್ಲಿ ಪೊಲೀಸರು ರವಿ ಪೂಜಾರಿಯನ್ನು ಹುಡುಕಿ ಕೊಂಡು ಬಂದಾಗ ಆತ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಮಾಹಿತಿ ಕುಟುಂಬದವರಿಗೆ ಗೊತ್ತಾಗಿರುವುದು ಎಂದು ಮೂಲಗಳು ತಿಳಿಸಿವೆ.
ಸೂರ್ಯ ಪೂಜಾರಿಯ ನಿವೃತ್ತಿ ನಂತರ ಪೊಲೀಸರು ರವಿ ಪೂಜಾರಿಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಪದೇ ಪದೇ ಮಲ್ಪೆ ಮನೆಗೆ ಆಗಮಿಸಿ ತಂದೆತಾಯಿಯನ್ನು ವಿಚಾರಣೆ ನಡೆಸುತ್ತಿದ್ದರೆನ್ನಲಾಗಿದೆ. ಇದರಿಂದ ಬೇಸತ್ತ ಸೂರ್ಯ ಪೂಜಾರಿ ಸುಮಾರು 12 ವರ್ಷಗಳ ಹಿಂದೆ ಮಲ್ಪೆಯ ಮನೆಯನ್ನು ಮಾರಾಟ ಮಾಡಿ ಊರನ್ನು ತ್ಯಜಿಸಿ ದೆಹಲಿಯಲ್ಲಿ ವಾಸವಾಗಿದ್ದ ತನ್ನ ಪುತ್ರಿ ಯರ ಮನೆಗೆ ಹೋಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಸೂರ್ಯ ಪೂಜಾರಿ ಸುಮಾರು ಐದು ವರ್ಷಗ ಹಿಂದೆ ಅಲ್ಲಿಯೇ ಮೃತಪಟ್ಟಿದ್ದರು.
ಉಡುಪಿ ಜಿಲ್ಲೆಯಲ್ಲಿ 10 ಪ್ರಕರಣ
ಪಶ್ಚಿಮ ಆಫ್ರಿಕಾದ ಸೆನೆಗಲ್ ಬಂಧಿತರಾಗಿದ್ದರೆನ್ನಲಾದ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತಿದ್ದ ಈತನ ವಿರುದ್ಧ 2006ರಲ್ಲಿ ಮೊದಲ ಪ್ರಕರಣವು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಳಿಕ ಕಾರ್ಕಳ, ಬ್ರಹ್ಮಾವರ, ಉಡುಪಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಹುತೇಕ ಬೆದರಿಕೆ ಹಾಗೂ ಹಫ್ತಾ ವಸೂಲಿಗೆ ಸಂಬಂಧಿಸಿದ ಪ್ರಕರಣ ಗಳಾಗಿವೆ ಎಂದು ತಿಳಿದುಬಂದಿದೆ.







