ಈ ಬಾರಿ ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕುಮಾರಸ್ವಾಮಿ

ಬೆಂಗಳೂರು, ಫೆ.1: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಈ ಬಾರಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲವೆಂದು ಈಗಾಗಲೇ ನಾವು ಸ್ಪಷ್ಟಪಡಿಸಿದ್ದೇವೆ. ಆದರೂ, ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲು ಸೀತಾರಾಮ ಕಲ್ಯಾಣ ಚಿತ್ರದ ಉಚಿತ ಟಿಕೆಟ್‌ಗಳನ್ನು ಹಂಚಲಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ರೀತಿ ಅಪಪ್ರಚಾರ ಯಾರು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಖಿಲ್ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಸಿನಿಮಾ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾನೆ. ಆದರೆ, ಆತನನ್ನು ಬಲವಂತವಾಗಿ ರಾಜಕೀಯಕ್ಕೆ ಎಳೆಯುವುದಕ್ಕೆ ಒಂದು ವರ್ಗದ ಮಾಧ್ಯಮದವರೇ ಉತ್ತೇಜಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಿಖಿಲ್ ರಾಜಕೀಯಕ್ಕೆ ಬರಬೇಕೆಂದು ಬಯಸಿದರೆ, ಖಂಡಿತವಾಗಿ ಚುನಾವಣೆಗೆ ನಿಲ್ಲಿಸುತ್ತೇವೆ. ಆದರೆ, ಸದ್ಯಕ್ಕೆ ಅಂತಹ ಯಾವುದೇ ತೀರ್ಮಾನಗಳು ಆಗಿಲ್ಲ. ಮಂಡ್ಯದಲ್ಲಿ ದೇವೇಗೌಡರು ಸ್ಪರ್ಧಿಸಲಿ, ಅವರ ಪರವಾಗಿ ಕೆಲಸ ಮಾಡುತ್ತೇನೆಂದು ನಿಖಿಲ್ ಈ ಹಿಂದೆಯೇ ಹೇಳಿದ್ದಾನೆ ಎಂದು ಅವರು ತಿಳಿಸಿದರು.
ಉಚಿತ ಟಿಕೆಟ್‌ಗಳನ್ನು ಹಂಚುವ ಮೂಲಕ ನಾವು ಸಿನಿಮಾವನ್ನು ಓಡಿಸುತ್ತಿಲ್ಲ. ಮಂಡ್ಯದಲ್ಲಿ ಉಚಿತ ಟಿಕೆಟ್ ಹಂಚಿದರೆ, ರಾಜ್ಯದ ಬೇರೆ ಕಡೆಯಲ್ಲ ಚಿತ್ರ ಹೇಗೆ ಉತ್ತಮ ಪ್ರದರ್ಶನ ಕಾಣಲು ಸಾಧ್ಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹಿರಿಯ ನಟ ಅಂಬರೀಶ್ ಕುಟುಂಬ ನಮ್ಮ ಪಕ್ಷಕ್ಕೆ ಸೇರಿದವರಲ್ಲ. ಒಂದು ವೇಳೆ ಅವರ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಅದಕ್ಕೆ ನಾವು ವಿರೋಧ ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲ. ಅದು ಅವರ ವೈಯಕ್ತಿಕವಾದ ನಿರ್ಧಾರವಾಗಿರುತ್ತದೆ ಎಂದು ಅವರು ಹೇಳಿದರು.







