ಬಿಎಸ್‌ಎನ್‌ಎಲ್ ಗುತ್ತಿಗೆ ನೌಕರರಿಂದ ಅನಿರ್ಧಿಷ್ಠಾವಧಿ ಮುಷ್ಕರ: ಬಾಕಿ ಇರುವ ನಾಲ್ಕು ತಿಂಗಳ ವೇತನ ಪಾವತಿಗೆ ಒತ್ತಾಯ

ಉಡುಪಿ, ಫೆ.1: ಕಳೆದ ನಾಲ್ಕು ತಿಂಗಳಿನಿಂದ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಉಡುಪಿ ದೂರಸಂಪರ್ಕ ವಿಭಾಗದ ಮೂರು ತಾಲೂಕುಗಳ ಸುಮಾರು 200 ಮಂದಿ ಗುತ್ತಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದ್ದಾರೆ.
ಫೆ.1 ಶುಕ್ರವಾರದಿಂದ ಕೆಲಸಕ್ಕೆ ಗೈರುಹಾಜರಾಗಿರುವ ವಿಭಾಗದಲ್ಲಿ ದುಡಿ ಯುತ್ತಿರುವ ಎಲ್ಲಾ ಗುತ್ತಿಗೆ ನೌಕರರು ಉಡುಪಿಯಲ್ಲಿರುವ ಟೆಲಿಪೋನ್ ಎಕ್ಸೆಚೆಂಜ್ ಎದುರು ಧರಣಿ ಕುಳಿತಿದಿದ್ದಾರೆ. ಮಂಗಳೂರು ದೂರಸಂಪರ್ಕ ಜಿಲ್ಲೆಯಲ್ಲಿ ಸುಮಾರು 600 ಮಂದಿ ಗುತ್ತಿಗೆ ನೌಕರರಿದ್ದು, ಇವರಲ್ಲಿ 200 ಮಂದಿ ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ದುಡಿಯುತಿದ್ದಾರೆ.
ಉಡುಪಿ ಜಿಲ್ಲಾ ಬಿಎಸ್‌ಎನ್‌ಎಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ ವತಿಯಿಂದ ನಡೆದಿರುವ ಧರಣಿಯಲ್ಲಿ ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಕಳೆದ ಅಕ್ಟೋಬರ್ ತಿಂಗಳಿನಿಂದ ಕೇಂದ್ರ ಸರಕಾರ ಅನುದಾನ ನೀಡುವುದನ್ನು ನಿಲ್ಲಿಸಿದೆ ಇದಕ್ಕೆ ಕಾರಣಗಳನ್ನು ತಿಳಿಯಬೇಕಾಗಿದೆ ಎಂದರು.
ಕಳೆದ ಏಪ್ರಿಲ್‌ನಿಂದಲೇ ನಮಗೆ ವೇತನವನ್ನು ನೀಡಲಿಲ್ಲ. ಆದರೆ ಹೋರಾಟದ ಬಳಿಕ ಅಕ್ಟೋಬರ್‌ವರೆಗೆ ನಮಗೆ ಸಿಗುವ ಕೇವಲ 8,000ರೂ. ವೇತನವನ್ನು ನೀಡಲಾಗಿದೆ. ಅದರ ಬಳಿಕ ಇದೀಗ ಜನವರಿವರೆಗೆ ಅಂದರೆ ಕಳೆದ ನಾಲ್ಕು ತಿಂಗಳಿನಿಂದ ವೇತನವನ್ನೇ ಪಾವತಿಸಿಲ್ಲ ಎಂದರು.
ಇದಕ್ಕೆ ಏನು ಹಾಗೂ ಯಾರು ಕಾರಣ ಎಂಬುದು ತಿಳಿಯಬೇಕಾಗಿದೆ. ಕೇಂದ್ರ ಸರಕಾರವೊ ಅಥವಾ ಇಲಾಖೆಯೊ ಎಂಬುದು ಗೊತ್ತಾಗಬೇಕು. ನಮಗೆ 4 ತಿಂಗಳಿನಿಂದ ವೇತನ ನೀಡದಿದ್ದರೂ, ನಮ್ಮ ಸೇವೆಯನ್ನು ಅಧಿಕಾರಿ ಗಳು ಬಳಸಿಕೊಂಡಿದ್ದಾರೆ. ಅವರಲ್ಲಿ ಮಾನವೀಯತೆಯೇ ಇಲ್ಲವಾಗಿದೆ ಎಂದರು.
ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುವ ಈ ದಿನಗಳಲ್ಲಿ ಒಂದು ತಿಂಗಳ ವೇತನ ಸಿಗದಿದ್ದರೆ ಯಾವ ಪರಿಸ್ಥಿತಿ ಇರಬಹುದೆಂದು ಎಲ್ಲರಿಗೂ ಗೊತ್ತು. ಆದರೂ ನಾವು ನಾಲ್ಕು ತಿಂಗಳಿನಿಂದ ಜಾತಕಪಕ್ಷಿಗಳಂತೆ ವೇತನಕ್ಕಾಗಿ ಕಾದು ಕುಳಿತಿದ್ದೇವೆ. ವೇತನ ಪಾವತಿಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಆದುದರಿಂದ ದೂರವಾಣಿ ಕೇಂದ್ರ, ಮೊಬೈಲ್ ಟವರ್, ಕಚೇರಿಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು ಸಂಪೂರ್ಣ ವೇತನ ಪಾವತಿಯಾಗುವವರೆಗೆ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ ಎಂದರು.
ಕಳೆದ ನಾಲ್ಕು ತಿಂಗಳ ವೇತನವನ್ನು ಪಾವತಿಸಿದ ತಕ್ಷಣ ನಾವೆಲ್ಲರೂ ಮತ್ತೆ ಕೆಲಸಕ್ಕೆ ಹಾಜರಾಗಲು ಸಿದ್ಧರಿದ್ದೇವೆ ಎಂದು ಈಗಾಗಲೇ ದಕ್ಷಿಣ ಕನ್ನಡ ದೂರ ಸಂಪರ್ಕ ಜಿಲ್ಲೆಯ ಮಹಾಪ್ರಬಂಧಕರಿಗೆ ಲಿಖಿತವಾಗಿ ತಿಳಿಸಿದ್ದೇವೆ ಎಂದು ಶಶಿಧರ ಗೊಲ್ಲ ತಿಳಿಸಿದರು.
ಇಂದಿನ ಧರಣಿಯಲ್ಲಿ ಕಾರ್ಯದರ್ಶಿ ಮೋಹನ, ರಾಷ್ಟ್ರೀಯ ಸಮಿತಿಯ ಸದಸ್ಯ ಉದಯ ಬ್ರಹ್ಮಾವರ, ರಾಘವೇಂದ್ರ, ಸಂತೋಷ, ಸೀತಾರಾಮ, ಜಯರಾಮ ಮುಂತಾದವರು ಉಪಸ್ಥಿತರಿದ್ದರು.








