ಸಂಘಪರಿವಾರದ ಕೃತ್ಯಕ್ಕೆ ಪ್ರವಾದಿಯ ಸೌಹಾರ್ದವೇ ಉತ್ತರ: ಮಹೇಂದ್ರ ಕುಮಾರ್
ನೈಜ ಹಿಂದೂಗಳಿಗೆ ಸಂಘಪರಿವಾರದಿಂದ ಕಂಟಕ

ಮಂಗಳೂರು, ಫೆ.1: ಕುರ್‌ಆನ್‌ನ್ನು ಸ್ಪಷ್ಟವಾಗಿ ಅರಿಯದೇ ಕೆಲವರು ಭಯೋತ್ಪಾದಕರಾಗುತ್ತಿದ್ದಾರೆ. ಹಿಂದೂ ಧರ್ಮವನ್ನು ಅರಿಯದೇ ಹಿಂದೂಗಳು ದ್ವೇಷ ಹುಟ್ಟಿಸುತ್ತಿರುವುದು ಅಪಾಯಕಾರಿ. ನೈಜ ಹಿಂದೂಗಳಿಗೆ ಸಂಘಪರಿವಾರದಿಂದ ಭವಿಷ್ಯದಲ್ಲಿ ಕಂಟಕ ಎದುರಾಗಲಿದೆ ಎಂದು ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಕೆ.ಆರ್. ಎಚ್ಚರಿಸಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಯುನಿವೆಫ್‌ನಿಂದ ಶುಕ್ರವಾರ ಹಮ್ಮಿಕೊಳ್ಳಲಾದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಕುರಿತ 2018ರ ನ.30ರಿಂದ 2019ರ ಫೆ.1ರವರೆಗೆ ನಡೆದ ಪ್ರವಾದಿ ಮುಹಮ್ಮದ್‌ರ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇಶದಲ್ಲಿ ಉಸಿರುಗಟ್ಟುವ ವಾತಾವರಣ: ಗಾಂಧೀಜಿಗಿಂತ ದೊಡ್ಡ ದೇಶಭಕ್ತರಿಲ್ಲ. ಗಾಂಧಿಯನ್ನು ಯಾರೋ ಹುಚ್ಚ ಹತ್ಯೆಗೈದ. ಆ ಹಂತಕನನ್ನೇ ಆರಾಧಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತರು ಮತ್ತೇ ದೇಶದ ಅಸ್ಮಿತೆಗೆ ಗುಂಡು ಹೊಡೆಯುತ್ತಿದ್ದಾರೆ. ಮುಗ್ಧ ಯುವಕರ ತಲೆಗೆ ಧರ್ಮದ ಅಮಲನ್ನು ಆರೆಸ್ಸೆಸ್ ತುಂಬುತ್ತಿದೆ. ದೇಶದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಯುವಕರು ಜಾಗೃತಗೊಳ್ಳಬೇಕಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ತನ್ನದು ಹಿಂದೂ ಧರ್ಮವೆಂದು ಎದೆತಟ್ಟಿ ಹೇಳು ಅಂದಿದ್ದಾರೆಯೇ ಹೊರತು ಉಳಿದ ಧರ್ಮದವರನ್ನು ದ್ವೇಷಿಸು ಎಂದು ಎಲ್ಲಿಯೂ ಪ್ರತಿಪಾದಿಸಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣಲು ಹೇಳಿದ್ದಾರೆ. ದ್ವೇಷದಿಂದ ಯಾವುದನ್ನೂ ಸಾಧಿಸಲಸಾಧ್ಯ. ಸಂಘಪರಿವಾರದ ಕೃತ್ಯಕ್ಕೆ ಪ್ರವಾದಿಯ ಸೌಹಾರ್ದವೇ ಉತ್ತರವಾಗಿದೆ. ಮುಸ್ಲಿಮರು ಮಾಡುತ್ತಿರುವ ಶಾಂತಿಯುತ ಕಾರ್ಯಕ್ರಮಗಳು, ಸೇವೆಗಳು ಅದ್ಭುತ ಕೆಲಸವಾಗಿದೆ ಎಂದು ಶ್ಲಾಘಿಸಿದರು.
ಕುಕೃತ್ಯಗಳಿಂದ ಸಂಘಪರಿವಾರವು ಭಾರತವನ್ನು ಪಾಕಿಸ್ಥಾನವನ್ನಾಗಿಸುವ ಹುನ್ನಾರಗಳು ನಡೆಯುತ್ತಿವೆ. ಅತ್ತ ಪಾಕಿಸ್ಥಾನವು ಭಾರತದಂತಾಗಲು ಯತ್ನಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಂಘಪರಿವಾರವು ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ದೇಶವನ್ನೇ ಬಲಿ ಕೊಡುತ್ತಿದೆ. ಸಂಘಪರಿವಾರದಲ್ಲಿ ಮನುಷ್ಯರು ಮನುಷ್ಯರಂತೆ ಬದುಕಲಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಮಾತನಾಡಿ, ಮುಹಮ್ಮದ್ ಪೈಗಂಬರರು ದೇವರು ಮತ್ತು ಮನುಕುಲದ ನಡುವಿನ ಕೊಂಡಿಯಾಗಿದ್ದಾರೆ. ಹಾಗಾಗಿ ಪ್ರವಾದಿಯನ್ನು ಗೌರವಿಸುವುದು ಇಂದಿನ ಅಗತ್ಯವಾಗಿದೆ. ಕೆಲವೆಡೆ ಪ್ರವಾದಿಯ್ನನು ಸಂಶಯದಿಂದ ಕಾಣುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲ ಧರ್ಮಗಳು ಸನಾತನ ಧರ್ಮಗಳಾಗಿವೆ. ಸನಾತನ ಧರ್ಮಗಳು ಎಂದಿಗೂ ನಶಿಸುವುದಿಲ್ಲ. ಅವು ಜನರ ಜೀವನಾಡಿಗಳಾಗಿರುತ್ತವೆ ಎಂದು ಹೇಳಿದರು.
ಸಂಕುಚಿತ ಭಾವಗಳು ಅಂತರ್‌ಮುಖಿಯಾಗುತ್ತಿವೆ. ಈ ಭಾವಗಳು ವಿಶಾಲವಾದಾಗ ಸಮಾಜಮುಖಿಯಗುತ್ತದೆ. ಪ್ರವಾದಿ ಮುಹಮ್ಮದ್‌ರು ನೀಡಿದ ಸಂದೇಶಗಳು ಸಮಾಜಮುಖಿಯಾಗಿದ್ದವು. ಹಾಗಾಗಿಯೇ ಜಗತ್ತಿನಲ್ಲಿ ಇಸ್ಲಾಂ ಸದೃಢವಾಗಿ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ‘ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಸಮಾರೋಪ ಭಾಷಣ ಮಾಡಿದರು.
ವೇದಿಕೆಯಲ್ಲಿ ಯುನಿವೆಫ್ ರಾಜ್ಯ ಕಾರ್ಯದರ್ಶಿ ಖಾಲಿದ್ ಯು.ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುನಿವೆಫ್ ಸದಸ್ಯರಾದ ಅತೀಕ್, ಸೈಯದ್, ತನ್ವೀರ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದ ಸಂಚಾಲಕ ಅಬ್ದುಲ್ಲಾ ಪಾರೆ ಸ್ವಾಗತಿಸಿದರು. ಸೈಯದ್ ಕುದ್ರೋಳಿ ಪ್ರಾರ್ಥಿಸಿದರು. ತಾಯೀಫ್ ಮತ್ತು ಅಬ್ದುಲ್ ರೆಹ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಸಿರಾಜುದ್ದೀನ್ ವಂದಿಸಿದರು.








