ವಕ್ಫ್ ಮಂಡಳಿಗೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

ಬೆಂಗಳೂರು, ಫೆ.1: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಈ ಕುರಿತು ವಿಜಯಪುರ ಜಿಲ್ಲೆ ಸಿಂದಗಿಯ ಅಂಜುಮನ್-ಏ-ಇಸ್ಲಾಂ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಕ್ಫ್ ಮಂಡಳಿಗೆ ಹಿರಿಯ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹೀಂ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2018ರ.ಸೆ.4ರಂದು ರಾಜ್ಯ ಸರಕಾರ ಹೊರಡಿಸಿದ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ವಕ್ಫ್ ಕಾಯ್ದೆ-1995ರ ಅನ್ವಯ ವಕ್ಫ್ ಮಂಡಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಬರುವುದಿಲ್ಲ. ಆದರೆ, ಕಾಯ್ದೆಗೆ ವಿರುದ್ಧವಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಸ್ವಾಯತ್ತ ಸಂಸ್ಥೆಯಾಗಿರುವ ವಕ್ಫ್ ಮಂಡಳಿಗೆ ಸದಸ್ಯರನ್ನೊಳಗೊಂಡ ಮಂಡಳಿ (ಬೋರ್ಡ್) ರಚಿಸುವ ಬದಲು ರಾಜ್ಯ ಸರಕಾರ ವಕ್ಫ್ ಮಂಡಳಿಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಹೀಗಾಗಿ, ಆಡಳಿತಾಧಿಕಾರಿ ನೇಮಿಸಿ 2018ರ ಸೆ.4ರಂದು ರಾಜ್ಯ ಸರಕಾರ ಹೊರಡಿಸಿದ ಆದೇಶ ರದ್ದುಗೊಳಿಸಬೇಕು ಹಾಗೂ ಆದಷ್ಟು ಶೀಘ್ರ ಸದಸ್ಯರನ್ನೊಳಗೊಂಡ ಮಂಡಳಿ ರಚಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.





