ನಿಮ್ಮ ಕೈಗಳು,ಪಾದಗಳು ಅತಿಯಾಗಿ ಬೆವರುತ್ತಿವೆಯೇ?: ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು

ನಿಮ್ಮ ಕೈಗಳು, ಪಾದಗಳು ಅತಿಯಾಗಿ ಬೆವರುತ್ತಿವೆಯೇ?, ಹಾಗಿದ್ದರೆ ಇದರಿಂದ ಪಾರಾಗಲು ಈ ಪರಿಣಾಮಕಾರಿ ಮನೆಮದ್ದುಗಳನ್ನು ಬಳಸಿ ನೋಡಿ.....
►ವಿನೆಗರ್: ವಿನೆಗರ್ ಆಮ್ಲೀಯ ಸ್ವರೂಪ ಹೊಂದಿರುವುದರಿಂದ ಅದು ನಿಮ್ಮ ಅಂಗೈಗಳು ಮತ್ತು ಪಾದಗಳ ಮೇಲಿರುವ ಯಾವುದೇ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಬೆಚ್ಚಗಿನ ನೀರಿನಲ್ಲಿ ವಿನೆಗರ್ ಬೆರೆಸಿ ಅದರಲ್ಲಿ ಸುಮಾರು 15ರಿಂದ 30 ನಿಮಿಷಗಳ ಕಾಲ ಕೈಗಳು ಮತ್ತು ಪಾದಗಳನ್ನಿರಿಸಿ. ಉತ್ತಮ ಪರಿಣಾಮಕ್ಕಾಗಿ ಆ್ಯಪಲ್ ಸಿಡೆರ್ ವಿನೆಗರ್ ಬಳಸಿ.
►ಚಹಾ: ಚಹಾ ಯಾವುದೇ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ ಮತ್ತು ಚರ್ಮದಲ್ಲಿಯ ರಂಧ್ರಗಳನ್ನು ಕಿರಿದಾಗಿಸಿ ನೀವು ಕಡಿಮೆ ಬೆವರುವಂತೆ ಮಾಡುತ್ತದೆ. ಕೆಲವು ಬ್ಲಾಕ್ ಟೀ ಬ್ಯಾಗ್‌ಗಳನ್ನು ಬಿಸಿನೀರಿನಲ್ಲಿ ಮುಳುಗಿಸಿ ಬಳಿಕ ಅವನ್ನು ಹೊರತೆಗೆದು ತಣ್ಣಗಾದ ಬಳಿಕ ಪಾದಗಳ ಮೇಲಿರಿಸಿಕೊಳ್ಳಿ.
►ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ತನ್ನ ಕ್ಷಾರಗುಣದಿಂದಾಗಿ ಪಾದಗಳು ಮತ್ತು ಅಂಗೈಗಳ ಪಿಎಚ್ ಸಮತೋಲನಕ್ಕೆ ನೆರವಾಗುತ್ತದೆ. ಬೆವರುವಿಕೆಯನ್ನು ಮತ್ತು ಪಾದಗಳ ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಬೇಕಿಂಗ್ ಸೋಡಾ ಕರಗಿಸಿ,15-20 ನಿಮಿಷಗಳ ಕಾಲ ಪಾದಗಳನ್ನು ಮುಳುಗಿಸಿ
►ಕಾರ್ನ್ ಸ್ಟಾರ್ಚ್: ನೀವು ಟಾಲ್ಕಂ ಪೌಡರ್ ಬಳಸುವ ರೀತಿಯಲ್ಲೇ ಕಾರ್ನ್ ಸ್ಟಾರ್ಚ್‌ನ್ನು ಅಂಗೈಗಳು ಮತ್ತು ಪಾದಗಳ ಮೇಲೆ ಉದುರಿಸಿಕೊಳ್ಳಿ. ಇದು ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ಕೈಗಳು ಹಾಗೂ ಪಾದಗಳನ್ನು ಒಣದಾಗಿರಿಸುತ್ತದೆ.
►ತೆಂಗಿನೆಣ್ಣೆ: ತೆಂಗಿನೆಣ್ಣೆಯು ಕೈಗಳು ಮತ್ತು ಪಾದಗಳನ್ನು ತೇವಗೊಳಿಸುತ್ತದೆ ಮತ್ತು ಬೆವರುವಿಕೆಯನ್ನು ತಡೆಯುತ್ತದೆ. ಅದು ಬೆವರು ಮತ್ತು ವಾಸನೆಯನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಮತ್ತು ತನ್ನ ನೈಸರ್ಗಿಕ ಸುಗಂಧದಿಂದಾಗಿ ನಿಮ್ಮನ್ನು ತಾಜಾ ಆಗಿರಿಸುತ್ತದೆ. ಸ್ನಾನದ ಬಳಿಕ ಸ್ವಲ್ಪ ತೆಂಗಿನೆಣ್ಣೆಯಲ್ಲಿ ಪೀಡಿತ ಜಾಗಗಳಿಗೆ ಹಚ್ಚಿಕೊಂಡರೆ ಸಾಕು.
►ಪನ್ನೀರು: ಹತ್ತಿಯಿಂದ ಸಾವಯವ ಪನ್ನೀರನ್ನು ನಿಮ್ಮ ಅಂಗೈಗಳು ಮತ್ತು ಪಾದಗಳಿಗೆ ಲೇಪಿಸಿಕೊಳ್ಳಿ. ಅದು ನಿಮ್ಮ ಚರ್ಮಕ್ಕೆ ತಂಪಿನ ಅನುಭವವನ್ನೂ ನೀಡುತ್ತದೆ
►ತಣ್ಣೀರು: ಪ್ರತಿ ದಿನ 20 ನಿಮಿಷಗಳ ಕಾಲ ನಿಮ್ಮ ಕೈಗಳು ಮತ್ತು ಕಾಲುಗಳನ್ನು ತಣ್ಣೀರಿನಲ್ಲಿ ಮುಳುಗಿಸಿ. ಇದು ಬಹುಮಟ್ಟಿಗೆ ಸಮಸ್ಯೆಯನ್ನು ಬಗೆಹರಿಸುತ್ತದೆ.
►ಲಿಂಬೆ: ಲಿಂಬೆ ಮತ್ತು ಕಿತ್ತಳೆ ಸಿಪ್ಪೆಗಳನ್ನು ಚೆನ್ನಾಗಿ ಒಣಗಿಸಿ ಬಳಿಕ ಹುಡಿ ಮಾಡಿ ಕೈಕಾಲುಗಳ ಮೇಲೆ ಉದುರಿಸಿಕೊಂಡರೆ ಬೆವರುವಿಕೆ ಕಡಿಮೆಯಾಗುತ್ತದೆ. ಲಿಂಬೆ ರಸವನ್ನು ಉಪ್ಪಿನೊಂದಿಗೆ ಮಿಶ್ರಗೊಳಿಸಿ ಕೈಗಳಿಗೆ ಉಜ್ಜಿಕೊಳ್ಳಿ ಮತ್ತು ಅದು ಒಣಗಿದ ಬಳಿಕ ತೊಳೆೆದುಕೊಳ್ಳಿ. ಈ ವಿಧಾನವೂ ಬೆವರುವಿಕೆಯನ್ನು ತಗ್ಗಿಸುತ್ತದೆ.
►ಗಂಧದ ಹುಡಿ: ಜನರು ಬಹು ಹಿಂದಿನಿಂದಲೂ ಅರೆದ ಗಂಧವನ್ನು ಹಣೆಗೆ ಹಚ್ಚಿಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಗಂಧವು ತಂಪನ್ನುಂಟು ಮಾಡುವ ಗುಣವನ್ನು ಹೊಂದಿದೆ. ಗಂಧದ ಹುಡಿಗೆ ನೀರು,ಲಿಂಬೆರಸ ಅಥವಾ ಪನ್ನೀರು ಬೆರೆಸಿ ಪೇಸ್ಟ್ ಅನ್ನು ತಯಾರಿಸಿಕೊಳ್ಳ್ಳಿ. ಇದನ್ನು ಬೆವರುವ ಸ್ಥಳಗಳಲ್ಲಿ ಲೇಪಿಸಿ,ಒಣಗಿದ ಬಳಿಕ ತೊಳೆದುಕೊಳ್ಳಿ.
►ಟೊಮೆಟೊ ರಸ: ಟೊಮೆಟೊ ರಸವು ಶರೀರಕ್ಕೆ ತಂಪು ಅನುಭವ ನೀಡುವುದರೊಂದಿಗೆ ಬೆವರುವುದನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸಬಹುದು ಅಥವಾ ಕೈಗಳಿಗೆ ಲೇಪಿಸಿಕೊಳ್ಳಬಹುದು. ಅದರಲ್ಲಿ ಸೋಡಿಯಂ ಸಹ ಇರುವುದರಿಂದ ಕೈಗಳು ಮತ್ತು ಪಾದಗಳು ಒಣದಾಗಿರುತ್ತವೆ.







