ಉದ್ಯೋಗ ಖಾತರಿ ಯೋಜನೆಗೆ ಕಳೆದ ವರ್ಷಕ್ಕಿಂತ ಕಡಿಮೆ ಅನುದಾನ ನಿಗದಿ

ಹೊಸದಿಲ್ಲಿ, ಫೆ.1: ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವ ಪಿಯೂಷ್ ಗೋಯೆಲ್ 2019-20ರ ಆರ್ಥಿಕ ವರ್ಷದಲ್ಲಿ ಸರಕಾರ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂನರೆಗ)ಗೆ 60 ಸಾವಿರ ಕೋಟಿ ರೂ. ನಿಗದಿಗೊಳಿಸಿರುವುದಾಗಿ ಘೋಷಿಸಿದ್ದಾರೆ.
ಈ ಮಹತ್ವದ ಯೋಜನೆಗೆ ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ಒದಗಿಸುವುದಾಗಿ ಸಚಿವರು ಹೇಳಿದ್ದಾರೆ. ಆದರೆ ಸರಕಾರ ಘೋಷಿಸಿದ ಅನುದಾನ ಕಳೆದ ವರ್ಷ ನೀಡಿದ್ದ ಅನುದಾನಕ್ಕಿಂತ ಶೇ.1.8ರಷ್ಟು ಕಡಿಮೆ ಮೊತ್ತ ನೀಡಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ. 2018ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಮಂಡಿಸಿದ್ದ ಬಜೆಟ್‌ನಲ್ಲಿ ಉದ್ಯೋಗ ಖಾತರಿ ಯೋಜನೆಗೆ 55 ಸಾವಿರ ಕೋಟಿ ರೂ. ತೆಗೆದಿರಿಸಲಾಗಿತ್ತು. ಆದರೆ ಅಧಿಕ ವೆಚ್ಚವಾಗಿರುವ ಹಿನ್ನೆಲೆಯಲ್ಲಿ 2019ರ ಜನವರಿಯಲ್ಲಿ ಸರಕಾರ ಹೆಚ್ಚುವರಿಯಾಗಿ 6,084 ಕೋಟಿ ರೂ. ಒದಗಿಸಿದ್ದು ಇದರೊಂದಿಗೆ ಕಳೆದ ಆರ್ಥಿಕ ವರ್ಷದಲ್ಲಿ ಈ ಯೋಜನೆಯಲ್ಲಿ ಒಟ್ಟು ವೆಚ್ಚ 61,084 ಕೋಟಿ ರೂ. ಆಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆಗೆ ಬಜೆಟ್‌ನಲ್ಲಿ ನಿಗದಿಗೊಳಿಸಿರುವ ಮೊತ್ತ ಹಾಗೂ ಆ ಬಳಿಕ ಹೆಚ್ಚುವರಿಯಾಗಿ ಬಿಡುಗಡೆಗೊಳಿಸಿರುವ ಮೊತ್ತವನ್ನು ಗಮನಿಸಿದರೆ, ಉದ್ಯೋಗ ಖಾತರಿ ಯೋಜನೆಗೆ ಬೇಡಿಕೆ ಕ್ರಮೇಣ ಹೆಚ್ಚುತ್ತಿದ್ದರೂ ಬೇಡಿಕೆಯನ್ನು ಪೂರ್ಣವಾಗಿ ಈಡೇರಿಸಲು ಸರಕಾರ ವಿಫಲವಾಗಿರುವುದು ತಿಳಿದುಬರುತ್ತದೆ.
2018ರಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಮಟ್ಟದ ಸಂಘಟನೆಯಾಗಿರುವ ‘ನರೇಗಾ ಸಂಘರ್ಷ ಮೋರ್ಛ’ದ ಪ್ರತಿನಿಧಿಗಳು ಕೇಂದ್ರ ವಿತ್ತ ಸಚಿವರನ್ನು ಭೇಟಿಯಾಗಿ ಉದ್ಯೋಗ ಖಾತರಿ ಯೋಜನೆಗೆ ಕನಿಷ್ಟ 80 ಸಾವಿರ ಕೋಟಿ ರೂ. ನಿಗದಿಗೊಳಿಸಬೇಕೆಂದು ಮನವಿ ಸಲ್ಲಿಸಿದ್ದರು. ಆದರೆ ಸರಕಾರ ಬಜೆಟ್‌ನಲ್ಲಿ ಸಾಕಷ್ಟು ನಿಧಿ ಒದಗಿಸದ ಕಾರಣ ಸಂಬಳ ಪಾವತಿಯಲ್ಲಿ ವಿಳಂಬ, ಕನಿಷ್ಟ ವೇತನ ಪಾವತಿಯಾಗದಿರುವುದು, ಸರಿಯಾಗಿ ಕೆಲಸ ಲಭ್ಯವಾಗದಿರುವುದು ಮುಂತಾದ ಸಮಸ್ಯೆ ಉದ್ಭವಿಸಿದೆ ಎಂದು ಸಂಘಟನೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ, ಸರಕಾರ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸದಿದ್ದರೆ ಕಾರ್ಮಿಕರಿಗೆ ವೇತನದ ಜೊತೆ ದಂಡದ ಹಣವನ್ನೂ ಪಾವತಿಸಬೇಕು. ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಉದ್ಯೋಗ ಖಾತರಿ ಯೋಜನೆಗೆ ಕಡಿಮೆ ಹಣ ಒದಗಿಸಿರುವುದು ಸುಪ್ರೀಂಕೋರ್ಟ್‌ನ ಆದೇಶದ ಉಲ್ಲಂಘನೆಯಾಗಿದೆ ಎಂದು ಸಂಘಟನೆ ತಿಳಿಸಿತ್ತು. ಬೆಂಗಳೂರಿನ ಅಝೀಂ ಪ್ರೇಮ್‌ಜಿ ವಿವಿಯ ರಾಜೇಂದ್ರನ್ ನಾರಾಯಣನ್ ಹಾಗೂ ಇತರ ಇಬ್ಬರು ಸಂಶೋಧಕರ ತಂಡ 2017ರಲ್ಲಿ ನಡೆಸಿದ ಸಮೀಕ್ಷೆಯ ವರದಿಯಲ್ಲಿ ‘ನರೇಗ ಸಂಘರ್ಷ ಮೋರ್ಛ’ದ ನಿಲುವನ್ನು ಸಮರ್ಥಿಸಲಾಗಿದೆ. ಯೋಜನೆಯಡಿ ನಿಗದಿಗೊಳಿಸಿರುವ ಅನುದಾನದ ಶೇ.80ರಷ್ಟು ಮೊತ್ತ ಕೇವಲ ನಾಲ್ಕು ತಿಂಗಳಲ್ಲಿ ಬಳಕೆಯಾಗಿದ್ದು ಉಳಿದ ಶೇ.20ರಷ್ಟು ಮೊತ್ತವನ್ನು 8 ತಿಂಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಈ ಯೋಜನೆಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿ ಗ್ರಾಮೀಣ ಜನತೆಗೆ ಉದ್ಯೋಗದ ಅವಕಾಶ ಹೆಚ್ಚಿಸಬೇಕು ಎಂದು ಹಲವಾರು ಸಂಸದರು, ಸಾಮಾಜಿಕ ಕಾರ್ಯಕರ್ತರು, ರೈತ ಚಳವಳಿಯ ಮುಖಂಡರು ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದರು.
ಜನವರಿ 30ರಂದು ಪ್ರಧಾನಿಗೆ ಪತ್ರ ಬರೆದಿದ್ದ ಮೋರ್ಛಾದ ಸದಸ್ಯರು, ಇದುವರೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು 63,537 ಕೋಟಿ ರೂ. ವೆಚ್ಚವಾಗಿದ್ದರೆ ಲಭ್ಯವಿರುವ ಅನುದಾನ ಕೇವಲ 59,709 ಕೋಟಿ ರೂ. ಮಾತ್ರವಾಗಿದೆ. ಅಲ್ಲದೆ ಜನವರಿ ಮಧ್ಯಭಾಗದಲ್ಲಿ ಘೋಷಿಸಿರುವ 6,084 ಕೋಟಿ ರೂ.ಗಳ ಪೂರಕ ನಿಧಿ ಅತ್ಯಂತ ಕಡಿಮೆ ಮತ್ತು ತಡವಾಗಿ ಘೋಷಿಸಲ್ಪಟ್ಟಿದೆ. ಆದರೆ ಇನ್ನೂ ಬಿಡುಗಡೆಯಾಗಿಲ್ಲ ಎಂದು ತಿಳಿಸಿದ್ದಾರೆ. ಜನವರಿ 25ರಂದು ಜಾರ್ಖಂಡ್‌ನ ಬಿಜೆಪಿ ಸರಕಾರ ಉದ್ಯೋಗ ಖಾತರಿ ಯೋಜನೆಯಡಿ 39 ಕೋಟಿ ರೂ. ಪಾವತಿಗೆ ಬಾಕಿ ಇರುವ ಕಾರಣ ಹೆಚ್ಚುವರಿ ನಿಧಿ ಒದಗಿಸುವಂತೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದೆ. ಯೋಜನೆಯಡಿ ಹಣ ಪಾವತಿಗೆ ಅನುಕೂಲವಾಗಲೆಂದು ಮೋದಿ ಸರಕಾರ 2016ರಲ್ಲಿ ‘ದಿ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್‘
ಎಂಬ ವ್ಯವಸ್ಥೆಯನ್ನು ಆರಂಭಿಸಿದೆ. ಜನವರಿ 2019ರಲ್ಲಿ ಮಾಡಲಾಗಿರುವ ನಿಧಿ ವರ್ಗಾವಣೆ ಆದೇಶದ ಶೇ.81ರಷ್ಟು ಮತ್ತು ಫೆಬ್ರವರಿ 2018ರಲ್ಲಿ ಮಾಡಲಾಗಿರುವ ಶೇ.43ರಷ್ಟು ಆದೇಶಗಳನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಇನ್ನೂ ಪರಿಷ್ಕರಿಸಿಲ್ಲ ಎಂದು ಈ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯಾಗಿ ಫೆಬ್ರವರಿ 2ಕ್ಕೆ 13 ವರ್ಷವಾಗುತ್ತದೆ. ಆದರೂ ಈ ದಿನಗಳಲ್ಲಿ ಉದ್ಯೋಗದ ಹಕ್ಕು ಎಂಬುದು ಒಂದು ಅಣಕದ ವಿಷಯವಾಗಿಯೇ ಮುಂದುವರಿದಿದೆ ಎಂದು ಜಾರ್ಖಂಡ್‌ನ ‘ನರೇಗಾ ವಾಚ್’ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ 3 ವರ್ಷಗಳಲ್ಲಿ ಜಾರ್ಖಂಡ್ ಸರಕಾರ 7 ಲಕ್ಷ ಜಾಬ್‌ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಆದರೆ ಇದರ ಮಾಹಿತಿಯಿಲ್ಲದ ಹಲವಾರು ಜನರು ಇನ್ನೂ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಎಂನರೇಗಾ (ಉದ್ಯೋಗ ಖಾತರಿ ಯೋಜನೆ) ಕಾಯ್ದೆಯ ಪ್ರಕಾರ, ಗ್ರಾಮೀಣ ಕುಟುಂಬವೊಂದು ಸರಕಾರದಿಂದ ಕನಿಷ್ಟ 100 ದಿನಗಳ (ವರ್ಷಕ್ಕೆ) ಉದ್ಯೋಗ ಪಡೆಯುವ ಹಕ್ಕು ಹೊಂದಿರುತ್ತದೆ.