ಬೆಂಗಳೂರು: ಸರಕಾರಿ ಆಸ್ಪತ್ರೆಗಳ ದುರಸ್ತಿ ಹೊಣೆ ಲೋಕೋಪಯೋಗಿ ಇಲಾಖೆಗೆ
ಬೆಂಗಳೂರು, ಫೆ.1: ಸಮರ್ಪಕ ನಿರ್ವಹಣೆ ಹಾಗೂ ದುರುಸ್ತಿಯಿಲ್ಲದೆ ಶಿಥಿಲಾವಸ್ತೆಯಲ್ಲಿರುವ ನಗರದ ಸರಕಾರಿ ಆಸ್ಪತ್ರೆಗಳ ನಿರ್ವಹಣೆ ಹೊಣೆಗಾರಿಕೆಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಳ್ಳಲು ಮುಂದಾಗಿದೆ.
ನಗರದ ಪ್ರಮುಖ ಸರಕಾರಿ ಆಸ್ಪತ್ರೆಗಳಾದ ಬೆಂಗಳೂರು ವೈದ್ಯಕೀಯ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ, ವಾಣಿ ವಿಲಾಸ್ ಆಸ್ಪತ್ರೆಗಳು ಸಮರ್ಪಕ ನಿರ್ವಹಣೆ ಹಾಗೂ ದುರಸ್ಥಿ ಕಾಣದೆ ಶಿಥಿಲಾವಸ್ಥೆಯಲ್ಲಿವೆ. ಇದರ ಪ್ರತಿಕೂಲ ಪರಿಣಾಮ ಆಸ್ಪತ್ರೆಗಳ ಕಾರ್ಯಚಟುವಟಿಕೆ ಮೇಲೆ ಬೀಳುತ್ತಿದೆ. ಇದರಿಂದ ಕಂಗೆಟ್ಟಿರುವ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆಯ ನಿರ್ದೇಶಕರು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ನಿರ್ವಹಣೆ ಹಾಗೂ ದುರಸ್ಥಿ ಹೊಣೆ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
2013ರಿಂದ ಲೋಕೋಪಯೋಗಿ ಇಲಾಖೆ ಸರಕಾರಿ ಆಸ್ಪತ್ರೆಗಳ ನಿರ್ವಹಣೆ ಹಾಗೂ ದುರಸ್ಥಿ ಕಾರ್ಯವನ್ನು ನಿಲ್ಲಿಸಿತ್ತು. ಆದರೆ, ಆಸ್ಪತ್ರೆಗಳ ನಿರ್ವಹಣೆ, ದುರಸ್ಥಿ ಕಾಣದ ಹಿನ್ನೆಲೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆಯ ಡೀನ್ ಪತ್ರ ಬರೆದು ಜವಾಬ್ದಾರಿ ವಹಿಸಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿರುವ ಇಲಾಖೆ ಅದಕ್ಕೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ನಿರ್ವಹಣೆ, ದುರಸ್ಥಿಗೆ ಯಾವ ಆಸ್ಪತ್ರೆಗೆ ಎಷ್ಟು ವೆಚ್ಚ: ವಿಕ್ಟೋರಿಯಾ ಆಸ್ಪತ್ರೆಗೆ ವಾರ್ಷಿಕ ನಿರ್ವಹಣಾ ವೆಚ್ಚ 1.30 ಕೋಟಿ, 3.95 ಕೋಟಿ ರೂಪಾಯಿ ದುರಸ್ತಿ ವೆಚ್ಚ ಆಗಲಿದೆ. ವಾಣಿ ವಿಲಾಸ್ ಆಸ್ಪತ್ರೆಗೆ ವಾರ್ಷಿಕ ನಿರ್ವಹಣಾ ವೆಚ್ಚ 24.40 ಲಕ್ಷ ರೂ., 3.91 ಕೋಟಿ ದುರಸ್ಥಿ ವೆಚ್ಚ ಎಂದು ಅಂದಾಜಿಸಲಾಗಿದೆ.
ಮಿಂಟೋ ಆಸ್ಪತ್ರೆಗೆ ವಾರ್ಷಿಕ 24 ಲಕ್ಷ ನಿರ್ವಹಣಾ ವೆಚ್ಚ ಹಾಗೂ 1.12 ಕೋಟಿ ರೂ. ದುರಸ್ಥಿ ವೆಚ್ಚ ತಗುಲಲಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿನ ವಾರ್ಷಿಕ ನಿರ್ವಹಣಾ ವೆಚ್ಚ 28.95 ಲಕ್ಷ ರೂ. ಹಾಗೂ 83.50 ಲಕ್ಷ ರೂ. ದುರಸ್ಥಿ ವೆಚ್ಚ. ಒಟ್ಟು ವಾರ್ಷಿಕ ನಿರ್ವಹಣಾ ವೆಚ್ಚವಾಗಿ 2.05 ಕೋಟಿ ರೂ. ಹಾಗೂ ಸುಮಾರು 10 ಕೋಟಿ ರೂ. ದುರಸ್ತಿ ವೆಚ್ಚವಾಗಲಿದ್ದು, ಈ ಹಣ ಬಿಡುಗಡೆಗೆ ಲೋಕೋಪಯೋಗಿ ಇಲಾಖೆ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.







