ಹವಾಮಾನ ನಿಗಾ ಕೇಂದ್ರ ಸ್ಥಾಪನೆಗೆ ಚಿಂತನೆ
ಒಲಿಂಪಿಕ್ಸ್‌ನಲ್ಲಿ ಬಿಸಿಲಿನ ಹೊಡೆತ

ಟೋಕಿಯೊ, ಫೆ.1: ಬೇಸಿಗೆಯಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಟಗಾರರಿಗೆ ಭಾರೀ ಬಿಸಿಲು ತೀವ್ರವಾಗಿ ಕಾಡುತ್ತದೆ.ಕೆಲವೊಮ್ಮೆ ಇದು ಸಾವಿಗೂ ಕಾರಣವಾಗುತ್ತದೆ. ಹಾಗಾಗಿ ತೀವ್ರ ಹವಾಮಾನದ ಉಸ್ತುವಾರಿಗೆ ಕೇಂದ್ರ ಸ್ಥಾಪಿಸಲು ಸಂಘಟನಾ ಸಮಿತಿ ಚಿಂತನೆ ನಡೆಸಿದೆ.
ಸಾಲು ಸಾಲು ಹವಾಮಾನ ಸಂಬಂಧಿ ದುರಂತಗಳ ಬಳಿಕ ಜಪಾನ್‌ನಲ್ಲಿ 2020ರಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಚಂಡಮಾರುತದ ಭೀತಿ ಅಲ್ಲದೆ ಅತೀ ಬಿಸಿಲಿನ ವಾತಾವರಣವು ಸಂಘಟಕರಿಗೆ ತಲೆನೋವಾಗಿ ಪರಿಣಮಿಸಿದೆ.
ಒಲಿಂಪಿಕ್ಸ್ ಸಂಘಟಕರು ಖಾಸಗಿ ಹವಾಮಾನ ಕಂಪೆನಿ ಮತ್ತು ಸರಕಾರದ ವಾಯುಶಾಸ್ತ್ರ ಏಜೆನ್ಸಿ ಜೊತೆ ಸೇರಿ ಕ್ರೀಡೆಗಳು ನಡೆಯುವ ಸ್ಥಳಗಳಲ್ಲಿ ಹವಾಗುಣ ಪರಿಸ್ಥಿತಿಯನ್ನು ಪರಿಶೀಲಿಸುವ ಕೆಲಸ ಮಾಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹವಾಗುಣದ ಉಸ್ತುವಾರಿಯನ್ನು ನೋಡಿಕೊಳ್ಳುವ ಕೇಂದ್ರವು, ಬಿಸಿಲಿನ ಝಳದ ಅಪಾಯ ಹಾಗೂ ಅವಶ್ಯವಾದರೆ ಪಂದ್ಯ ಸ್ಥಳಾಂತರಿಸುವ ಮಾಹಿತಿ ಸೇರಿದಂತೆ ಹವಾಗುಣ ಸಂಬಂಧಿ ತುರ್ತುಗಳ ಕುರಿತು ಎಚ್ಚರಿಕೆಗಳನ್ನು ರವಾನಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷ ಜಪಾನ್ ದಾಖಲೆಯ ಮಳೆ ಸೇರಿದಂತೆ ಹಲವು ಹವಾಗುಣ ತುರ್ತುಪರಿಸ್ಥಿತಿಗಳಿಂದ ತತ್ತರಿಸಿತ್ತು. ಭಾರೀ ಮಳೆಗೆ 200ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದರು.





