ಶ್ರೀಲಂಕಾ ಸ್ಪಿನ್ನರ್ ಧನಂಜಯಗೆ ಚೆನ್ನೈನಲ್ಲಿ ಬೌಲಿಂಗ್ ಪರೀಕ್ಷೆ

ಕೊಲಂಬೊ, ಫೆ.1: ಶ್ರೀಲಂಕಾದ ಸ್ಪಿನ್ನರ್ ಅಖಿಲ ಧನಂಜಯ ಚೆನ್ನೈನ ಶ್ರೀ ರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ಬೌಲಿಂಗ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)ಪ್ರಕಟನೆ ಮೂಲಕ ಈ ಬೆಳವಣಿಗೆಯನ್ನು ದೃಢಪಡಿಸಿದೆ.
‘‘ಸ್ಪಿನ್ನರ್ ಅಖಿಲ ಧನಂಜಯ ನಾಳೆ(ಫೆ.1)ಬೆಳಗ್ಗೆ ಭಾರತದ ಚೆನ್ನೈ ನಗರಕ್ಕೆ ತೆರಳಲಿದ್ದು, ತನ್ನ ಬೌಲಿಂಗ್ ಶೈಲಿಯ ಮರು ಪರೀಕ್ಷೆಗೆ ಒಳಗಾಗಲಿದ್ದಾರೆ. ಚೆನ್ನೈನ ಕ್ರೀಡಾ ವಿಜ್ಞಾನ ಕೇಂದ್ರ(ಸಿಎಸ್‌ಎಸ್)ದಲ್ಲಿ ಬೌಲಿಂಗ್ ಪರೀಕ್ಷೆ ನಡೆಯಲಿದೆ’’ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.
25ರ ಹರೆಯದ ಧನಂಜಯ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯ ವೇಳೆ ಶಂಕಾಸ್ಪದ ಬೌಲಿಂಗ್ ಶೈಲಿಯ ಆರೋಪಕ್ಕೆ ಒಳಗಾಗಿದ್ದರು. 2018ರ ಡಿಸೆಂಬರ್‌ನಲ್ಲಿ ಐಸಿಸಿ ಧನಂಜಯಗೆ ಬೌಲಿಂಗ್ ಮಾಡಲು ನಿಷೇಧ ಹೇರಿತ್ತು.
ಧನಂಜಯ ಶ್ರೀಲಂಕಾದ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ 16 ಏಕದಿನ ಪಂದ್ಯಗಳಲ್ಲಿ 23ರ ಸರಾಸರಿಯಲ್ಲಿ ಒಟ್ಟು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟೆಸ್ಟ್‌ನಲ್ಲಿ ಆಡಿರುವ 5 ಪಂದ್ಯಗಳ ಪೈಕಿ ಒಟ್ಟು 27 ವಿಕೆಟ್‌ಗಳನ್ನು ಪಡೆದಿದ್ದಾರೆ.







