ಬಿಇಎಲ್‌ಗೆ 507 ಕೋಟಿ ನಿವ್ವಳ ಲಾಭ
ಬೆಂಗಳೂರು, ಫೆ.1: ಭಾರತ್ ಎಲೆಕ್ಟ್ರಾನಿಕ್ಸ್ ಲಿ.(ಬಿಇಎಲ್) ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಈ ಅವಧಿಯಲ್ಲಿ ಸಂಸ್ಥೆಯು 507.63 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.
ಅಕ್ಟೋಬರ್‌ನಿಂದ ಡಿಸೆಂಬರ್‌ನ ಮೂರು ತಿಂಗಳ ಅವಧಿಯಲ್ಲಿ ಸಂಸ್ಥೆಯು 2,656.38 ಕೋಟಿ ರೂ. ವಹಿವಾಟು ನಡೆಸಿದೆ. ಇದರಿಂದ 1,258.67 ಕೋಟಿ ರೂ. ಆದಾಯ ಗಳಿಕೆ ಆಗಿದೆ. ಈ ಪೈಕಿ ತೆರಿಗೆ ಪಾವತಿಸಿದ ನಂತರ ಆದ ನಿವ್ವಳ ಲಾಭ 507.63 ಕೋಟಿ ರೂ., ಕಳೆದ ವರ್ಷ ಇದೇ ಅವಧಿಯಲ್ಲಿ 302.84 ಲಾಭ ಗಳಿಸಿತ್ತು ಎಂದು ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ 2018-19ರಲ್ಲಿ ಸಂಸ್ಥೆಯ ಮಂಡಳಿಯು ಶೇ.30ರಷ್ಟು ಮಧ್ಯಂತರ ಲಾಭಾಂಶ ಘೋಷಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಬಿಇಎಲ್ 2,452.31 ಕೋಟಿ ರೂ. ವಹಿವಾಟು ನಡೆಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8ರಷ್ಟು ವೃದ್ಧಿ ಕಂಡುಬಂದಿದೆ. 2017-18ರ ಮೂರನೆ ತ್ರೈಮಾಸಿಕದಲ್ಲಿ ಸಂಸ್ಥೆಯ ವಹಿವಾಟು 2,452 ಕೋಟಿ ರೂ. ಇತ್ತು.
ಕಳೆದ ಒಂಬತ್ತು ತಿಂಗಳಲ್ಲಿ ಬಿಇಎಲ್ 8,016.62 ಕೋಟಿ ರೂ. ವಹಿವಾಟು ನಡೆಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 6,578.59 ಕೋಟಿ ರೂ. ವಹಿವಾಟು ನಡೆಸಿತ್ತು. ಅಂದರೆ, ವಹಿವಾಟಿನಲ್ಲಿ ಶೇ. 20ರಷ್ಟು ಪ್ರಗತಿ ಕಂಡುಬಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.







