ಎರಡು ವರ್ಷ ಕಳೆದರೂ ಉಪಯೋಗವಾಗದ ಗ್ರಂಥಾಲಯ: ಸಾರ್ವಜನಿಕರ ಆಕ್ರೋಶ
ಬೆಂಗಳೂರು, ಫೆ.1: ನಗರದ ದೊಡ್ಡನೆಕ್ಕುಂದಿ ವಾರ್ಡ್‌ನ ತೂಬರಹಳ್ಳಿ ಮುಖ್ಯ ರಸ್ತೆಯಲ್ಲಿ ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡ ಲೋಕಾರ್ಪಣೆಯಾಗಿ ವರ್ಷಗಳೇ ಕಳೆದರೂ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ನೀಡದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತೂಬರಹಳ್ಳಿ ಮುಖ್ಯ ರಸ್ತೆಯಲ್ಲಿನ 20 ಗುಂಟೆ ಸ್ಥಳದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚ ಮಾಡಿ ಡಿಜಿಟಲ್ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿ, ಯುವಜನರಿಗೆ, ಹಿರಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿರುವ ಈ ಗ್ರಂಥಾಲಯವನ್ನು ಎರಡು ವರ್ಷಗಳ ಹಿಂದೆ ಉದ್ಘಾಟನೆಯನ್ನು ಮಾಡಲಾಗಿದೆ.
ಕಟ್ಟಡ ಉದ್ಘಾಟನೆಗೊಂಡು ವರ್ಷಗಳೇ ಕಳೆಯುತ್ತಿದ್ದರೂ ಇನ್ನೂ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಡಿಜಿಟಲ್ ಮಾದರಿಯಲ್ಲಿರುವ ಈ ಗ್ರಂಥಾಲಯದ ನೆಲ ಮಹಡಿಯಲ್ಲಿ ಮಕ್ಕಳ ಅಧ್ಯಯನ ಕೇಂದ್ರ, ಐಎಎಸ್, ಕೆಎಎಸ್ ಹಾಗೂ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅಗತ್ಯವಾದ ಪುಸ್ತಕಗಳಿವೆ. ಇನ್ನುಳಿದಂತೆ ಮೊದಲ ಮಹಡಿಯಲ್ಲಿ ಪತ್ರಿಕೆಗಳು, ರೆಫರೆನ್ಸ್ ಪುಸ್ತಕ ವಿಭಾಗ, ಕಾನ್ಫರೆನ್ಸ್ ರೂಂ ಸೇರಿದಂತೆ ವಿವಿಧ ಸೌಲಭ್ಯಗಳುಳ್ಳ ಕಟ್ಟಡ ನಿರ್ಮಿಸಲಾಗಿದೆ.
ಆದರೆ, ಕಟ್ಟಡದಲ್ಲಿ ಯಾವುದೆ ಪುಸ್ತಕಗಳು ಹಾಗೂ ಡಿಜಿಟಲ್ ಯಂತ್ರಗಳು ಬಾರದೆ ಕಟ್ಟಡ ಸಂಪೂರ್ಣವಾಗಿ ಖಾಲಿಯಾಗಿ ಉಳಿದಿದ್ದು ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ಮಾರತ್ತಹಳ್ಳಿ-ವರ್ತೂರು ಮುಖ್ಯ ರಸ್ತೆಯಲ್ಲಿ ಈ ಗ್ರಂಥಾಲಯ ಇರುವುದರಿಂದ ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ ಟೆಂಡರ್ ಮೂಲಕ ಹರಾಜು ಕೂಗಿ ಲೈಬ್ರರಿ ಪ್ರಾರಂಭಿಸಿದರೆ ಬಿಬಿಎಂಪಿಯಿಂದ ನಿಗದಿತ ಸಮಯಕ್ಕೆ ಹೂಡಿಕೆ ಮಾಡಿದ ಹಣ ಬರುವುದಿಲ್ಲವೆಂದು ಗುತ್ತಿಗೆದಾರರು ಟೆಂಡರ್‌ಗೆ ಮುಂದಕ್ಕೆ ಬರುತ್ತಿಲ್ಲ ಎನ್ನಲಾಗಿದೆ.







