ಮಿಥಾಲಿ ಪಡೆ ಮಡಿಲಿಗೆ ಏಕದಿನ ಸರಣಿ
ಭಾರತದ ವನಿತೆಯರಿಗೆ 3ನೇ ಪಂದ್ಯದಲ್ಲಿ ಸೋಲು

ಹ್ಯಾಮಿಲ್ಟನ್, ಫೆ.1: ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಸಾಧಾರಣ ಪ್ರಯತ್ನ ನಡೆಸಿದ ಕಾರಣ ನ್ಯೂಝಿಲೆಂಡ್ ಎದುರು 8 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಮೊದಲ 2 ಪಂದ್ಯ ಗಳಲ್ಲಿ ಗೆದ್ದ ಭಾರತ ತಂಡ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.
ಭಾರತ ನೀಡಿದ 150 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ನ್ಯೂಝಿಲೆಂಡ್ ತಂಡ 29.2 ಓವರ್‌ಗಳಲ್ಲಿ ಗುರಿ ತಲುಪಿ ಸಮಾಧಾನ ಪಟ್ಟುಕೊಂಡಿತು.
ಟಾಸ್ ಗೆದ್ದ ಕಿವೀಸ್ ತಂಡ ಮೊದಲು ಕ್ಷೇತ್ರರಕ್ಷಣೆಯನ್ನು ಆಯ್ದುಕೊಂಡಿತು. ಭಾರತದ ಬ್ಯಾಟಿಂಗ್‌ನಲ್ಲಿ ಮೂರನೆಯವರಾಗಿ ಕಣಕ್ಕಿಳಿದ ದೀಪ್ತಿ ಶರ್ಮಾ ಅರ್ಧಶತಕ (52, 90 ಎಸೆತ) ಗಳಿಸಿ ಅತ್ಯಧಿಕ ಸ್ಕೋರ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ತಾರಾ ಬ್ಯಾಟ್ಸ್‌ವುಮನ್ ಹರ್ಮನ್‌ಪ್ರೀತ್ ಕೌರ್ 40 ಎಸೆತಗಳಲ್ಲಿ 24 ರನ್ ಗಳಿಸಿ ಅಲ್ಪ ಕಾಣಿಕೆ ನೀಡಿದರು. ದಯಾಳನ್ ಹೇಮಲತಾ 13 ರನ್ ಗಳಿಸಿದರು. ತಮ್ಮ 200ನೇ ಏಕದಿನ ಪಂದ್ಯವಾಡಿದ ನಾಯಕಿ ಮಿಥಾಲಿ ರಾಜ್ ಕೇವಲ 9 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಒಂದು ಹಂತದಲ್ಲಿ 117 ರನ್ ಗಳಿಸಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಪ್ರವಾಸಿ ತಂಡ, 44 ಓವರ್‌ಗಳಲ್ಲಿ ಸರ್ವಪತನ ಕಂಡಿತು. ನ್ಯೂಝಿಲೆಂಡ್ ಪರ ಬೌಲಿಂಗ್‌ನಲ್ಲಿ ಮಿಂಚು ಹರಿಸಿದ ಅನ್ನಾ ಪೀಟರ್ಸನ್ 10 ಓವರ್ ಬೌಲಿಂಗ್ ಮಾಡಿ 28 ರನ್ ನೀಡಿ ಅಮೂಲ್ಯ ನಾಲ್ಕು ವಿಕೆಟ್ ಕಬಳಿಸಿದರು.
ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್ ತಂಡಕ್ಕೆ ಖ್ಯಾತ ಆಟಗಾರ್ತಿ ಸುಸಿ ಬೇಟ್ಸ್ (57) ಹಾಗೂ ನಾಯಕಿ ಅಮಿ ಸಟ್ಟೆರ್ಥ್‌ವೈಟ್ (ಅಜೇಯ 66) ಅರ್ಧಶತಕಗಳನ್ನು ಬಾರಿಸಿ ಜಯದ ತೋರಣ ಕಟ್ಟಿದರು.
ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 105 ಹಾಗೂ 90 ರನ್ ಗಳಿಸಿದ ಭಾರತದ ಸ್ಮತಿ ಮಂಧಾನಾಗೆ ಸರಣಿಶ್ರೇಷ್ಠ ಗೌರವ ಒಲಿಯಿತು. ಇತ್ತಂಡಗಳ ಮಧ್ಯೆ ಫೆ.6ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.
ಭಾರತ ಪುರುಷರ ತಂಡ ಕೂಡ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಸರಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ನಾಲ್ಕನೇ ಪಂದ್ಯದಲ್ಲಿ ನ್ಯೂಝಿಲೆಂಡ್ ಎದುರು ಹೀನಾಯ ಸೋಲು ಅನುಭವಿಸಿತ್ತು.
ನ್ಯೂಝಿಲೆಂಡ್‌ನಲ್ಲಿ ಪ್ರಥಮ ಬಾರಿಗೆ ಸರಣಿ ವಿಜಯ ಸಾಧಿಸಿರುವುದಕ್ಕೆ ಖುಷಿಯಾಗಿದೆ. ದೀಪ್ತಿ ಶರ್ಮಾ ಹಾಗೂ ಜೆಮಿಮಾ ರೋಡ್ರಿಗಸ್‌ರಂತಹ ಯುವ ಆಟಗಾರ್ತಿಯರು ರನ್ ಗಳಿಸುತ್ತಿರುವುದು ಸಂತಸದ ವಿಚಾರ. ಸರಣಿಯಾದ್ಯಂತ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದರು. ಆದರೆ ಇಂದು ನಾವು ಸಾಕಷ್ಟು ರನ್ ಗಳಿಸದ ಕಾರಣ ಸೋಲು ಅನುಭವಿಸಬೇಕಾಯಿತು.
►ಮಿಥಾಲಿ ರಾಜ್, ಭಾರತ ತಂಡದ ನಾಯಕಿ







