ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ
![ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಪತ್ತೆ](https://www.varthabharati.in/sites/default/files/images/articles/2019/02/2/175853.jpg)
ಲಕ್ನೋ, ಫೆ. 2: ಹದಿಹರೆಯದ ಇಬ್ಬರು ಬಾಲಕಿಯರ ಶವ ವಿದ್ಯುತ್ ಕಂಬಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ನಗರದ ಹೊರವಲಯದ ಲಕೀಂಪುರದ ಪಾಸ್ಗಾವನ್ ಪ್ರದೇಶದಲ್ಲಿ ಶುಕ್ರವಾರ ಸಂಜೆ 14 ಮತ್ತು 15 ವರ್ಷ ಪ್ರಾಯದ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದೆ.
ಈ ನಿಗೂಢ ಸಾವಿನ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಮಂದಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಕಾನೂನು- ಸುವ್ಯವಸ್ಥೆಗೆ ಭಂಗ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದಾರೆ.
ಘಟನೆಯನ್ನು ದೃಢಪಡಿಸಿದ ಎಸ್ಪಿ ಖಿರಿ ಪೂನಂ, "ಈ ಘಟನೆ ಜೀರಾ ಬೋಜ್ಹಿ ಗ್ರಾಮದಲ್ಲಿ ನಡೆದಿದ್ದು, ಹೈಟೆನ್ಷನ್ ವಿದ್ಯುತ್ ತಂತಿಯ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಎರಡು ಶವಗಳು ಪತ್ತೆಯಾಗಿವೆ. ಗ್ರಾಮದ ಹೊರಗೆ ಒಂದು ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ" ಎಂದು ವಿವರಿಸಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರು ಶವಗಳನ್ನು ವಿದ್ಯುತ್ ಕಂಬದಿಂದ ಇಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ ಎಂದು ಸ್ಥಳೀಯ ಠಾಣಾಧಿಕಾರಿ ಸತ್ಯೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.