ಮುಂದಿನ ನೋಟಿಸ್ ನನ್ನ ಅಡುಗೆಯವರಿಗೆ ಬರಬಹುದು: ಸಿಬಿಐ ನೋಟಿಸ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

ಕೋಲ್ಕತಾ, ಫೆ.2: ಪ್ರಧಾನಿ ಮೋದಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತನ್ನ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಸಿಬಿಐ ಅಧಿಕಾರಿಗಳನ್ನು ಮೋದಿ ತನ್ನ ನಿವಾಸಕ್ಕೆ ಕರೆಸಿಕೊಂಡು , ವಿಪಕ್ಷಗಳ ಘನತೆಗೆ ಕುಂದು ತರುವಂತಹ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ಮಮತಾ ಆರೋಪಿಸಿದರು.
ಶಾರದಾ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಮಮತಾ ಬ್ಯಾನರ್ಜಿಯ ಸಹಾಯಕ ಮಾಣಿಕ್ ಮಜೂಮ್ದಾರ್ರನ್ನು ವಿಚಾರಣೆ ನಡೆಸಿದ ಕುರಿತು ಟಿಎಂಸಿ ನಾಯಕಿ ಪ್ರತಿಕ್ರಿಯಿಸುತ್ತಿದ್ದರು. ”ಮಜೂಮ್ದಾರ್ಗೆ ವಯಸ್ಸಾಗಿದ್ದು ಅವರಿಗೆ ಸೌಖ್ಯವಿಲ್ಲ. ಅವರು ಪ್ರಾಮಾಣಿಕ ವ್ಯಕ್ತಿ. ರಾಜಕೀಯಪ್ರೇರಿತ ಕಾನೂನು ಕ್ರಮಗಳು ನನಗೆ ಹೊಸತಲ್ಲ. ಇದಕ್ಕೆಲ್ಲಾ ಭಯಪಡುವುದಿಲ್ಲ” ಎಂದವರು ಹೇಳಿದ್ದಾರೆ. ಅಲ್ಲದೆ ಟಿಎಂಸಿ ಮುಖಂಡ ಡೆರೆಕ್ ಒ’ಬ್ರಿಯಾನ್ಗೂ ಸಿಬಿಐ ನೋಟಿಸ್ ಜಾರಿಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಮತಾ, ಬಹುಷಃ ಮುಂದಿನ ನೋಟಿಸ್ ನನ್ನ ಅಡುಗೆಯವರಿಗೆ ಬರಬಹುದು ಎಂದು ಹೇಳಿದರು. ಶುಕ್ರವಾರ ಮೋದಿ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್ ಬಗ್ಗೆ ಟೀಕಿಸಿದ ಅಪರಾಧಕ್ಕಾಗಿ ಅವರು ನನ್ನನ್ನು ಬಂಧಿಸಲೂ ಬಹುದು ಎಂವರು ಹೇಳಿದರು.
ಮಮತಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕಾಧ್ಯಕ್ಷ ದಿಲೀಪ್ ಘೋಷ್, ಮಮತಾಗೆ ಈಗ ದಿಗಿಲಾಗಿದೆ. ಅವರ ಸುತ್ತಲಿರುವ ಜನರೆಲ್ಲಾ ಈಗ ಸಿಬಿಐಯ ಹದ್ದಿನ ಕಣ್ಣಿನಡಿ ಇದ್ದಾರೆ ಎಂದಿದ್ದಾರೆ.