ವಿಜೃಂಭಣೆಯಿಂದ ಜರುಗಿದ ಸುತ್ತೂರು ರಥೋತ್ಸವ

ಮೈಸೂರು,ಫೆ.3: ಸಡಗರ ಸಂಭ್ರಮ ಭಕ್ತಿಭಾವಗಳೊಂದಿಗೆ ವಿಜೃಂಭಣೆಯಿಂದ ಸುತ್ತೂರು ಶ್ರೀ ಶಿವರಾತ್ರೀಶ್ವರ ಭಗವತ್ಪಾದರ ರಥೋತ್ಸವ ಜರುಗಿತು.
ಸುತ್ತೂರಿನ ಕರ್ತೃ ಗದ್ದಿಗೆ ಮುಂಭಾಗ ರವಿವಾರ ಬೆಳಿಗ್ಗೆ 10.55 ಕ್ಕೆ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಮಠಗಳ ಮಠಾಧೀಶರು, ರಾಜಕಾರಣಿಗಳು ಮತ್ತು ಜನರು ಸಾಕ್ಷಿಯಾದರು.
ಚತ್ರಿ ಚಾಮರ, ವೀರಗಾಸೆ, ಮರಗಾಲು ಕುಣಿತ, ಗೊರವರ ಕುಣಿತ, ತಮಟೆ, ಕಂಸಾಳೆ ಸೇರಿದಂತೆ ವಿವಿಧ ಜಾನಪದಾ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಒಂದು ಚಿಕ್ಕ ತೇರು ಮತ್ತೊಂದು ದೊಡ್ಡ ತೇರು ಒಟ್ಟಿಗೆ ಸಾಗುವುದು ಈ ರಥೋತ್ಸವದ ವಿಶೇಷ. ಚಿಕ್ಕ ರಥ ಸುತ್ತೂರು ಗ್ರಾಮಧ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಸ್ವಸ್ಥಾನಕ್ಕೆ ಮರಳಿತು. ದೊಡ್ಡ ತೇರು ಕರ್ತೃ ಗದ್ದುಗೆಯ ಮುಂಭಾಗದ ರಸ್ತೆಯಲ್ಲಿ ಸಂಚರಿಸಿ ಅದು ಸಹ ಸ್ವಸ್ಥಾನ ಸೇರಿತು.
ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಹೊರರಾಜ್ಯಗಳಿಂದ ಜನರು ಆಗಮಿಸಿದ್ದರು. ಜನರು ಭಕ್ತಿಭಾವದೊಂದಿಗೆ ಹಣ್ಣು ಜವನವನ್ನು ಎಸೆದು ಭಾವಪರವಶರಾದರು. ಜಾತ್ರೆಗೆ ಆಗಮಿಸಿದ್ದ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಹೊರ ಊರುಗಳಿಂದ ಆಗಮಿಸಿರುವ ಭಕ್ತಾಧಿಗಳ ವಾಸ್ತವ್ಯಕ್ಕೆ ಇಲ್ಲೇ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಮಲ್ಲಿಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಆಯಾ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಿದ್ದರು.







