ಸವಣೂರು: ಗಾಂಧೀಜಿ ಹತ್ಯೆ ಮರುಸೃಷ್ಟಿ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ

ಪುತ್ತೂರು, ಫೆ. 3: ಉತ್ತರ ಪ್ರದೇಶದ ಆಲಿಗಢದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಾಗೂ ಇತರ ಅವರ ಸಹಕಾರ್ಯಕರ್ತರು ಮಹಾತ್ಮ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಿಸಿರುವ ಘಟನೆಯನ್ನು ಖಂಡಿಸಿ, ಆರೋಪಿಗಳ ಬಂಧಿಸುವಂತೆ ಆಗ್ರಹಿಸಿ ಸವಣೂರಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಸುಳ್ಯ ವಿಧಾನ ಸಭಾಕ್ಷೇತ್ರ ಸಮಿತಿಯ ವತಿಯಿಂದ ರವಿವಾರ ಸವಣೂರು ಜಂಕ್ಷನ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್.ಡಿ.ಪಿ.ಐ.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಗಾಂಧೀಜಿಯ ಹತ್ಯೆ ದೇಶದ ಪ್ರಥಮ ಭಯೋತ್ಪಾನೆಯಾಗಿದೆ. ಗೋಡ್ಸೆಯ ಮರುಜನ್ಮಕ್ಕೆ ಎಂದಿಗೂ ಅವಕಾಶ ನೀಡಬಾರದು ಎಂದು ನಿರ್ಧರಿಸಿ ಈ ಘಟನೆಯನ್ನು ಎಸ್‍ಡಿಪಿಐ ಗಂಭೀರವಾಗಿ ಪರಿಗಣಿಸಿದೆ. ಪೂಜಾ ಶಕುನ್ ಪಾಂಡೆಯ ಈ ಕೃತ್ಯಕ್ಕೆ ಪ್ರಬಲ ಪ್ರತಿಭಟನೆ ನೀಡಲು ಎಸ್‍ಡಿಪಿಐ ಸಜ್ಜಾಗಿದೆ. ''ಗೋಡ್ಸೆಯ ಮರುಜನ್ಮ ಅನುಮತಿಸಲಾರೆವು" ಎನ್ನುವ ಘೋಷಣೆಯೊಂದಿಗೆ ನಾಥೂರಾಮ್ ಗೋಡ್ಸೆಯ ಪ್ರತಿಕೃತಿಯನ್ನು ನೇಣುಕಂಬಕ್ಕೆ ಏರಿಸುವ ಮೂಲಕ ಗೋಡ್ಸೆ ನೇಣಿಗೇರಿದ ಚರಿತ್ರೆಯನ್ನು ಮರುಸೃಷ್ಟಿಸಲು ಮುಂದಾಗಿದ್ದೇವೆ. ಗಾಂಧಿ ಹತ್ಯೆಯನ್ನು ಮರುಸೃಷ್ಟಿಸಿ ಸಂಭ್ರಮಿಸುವ ಬೆಳವಣಿಗೆ ಕಂಡು ಬಂದರೂ ಗಾಂಧಿ ಟೋಪಿ ಹಾಕಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ ಈ ಕುರಿತು ಚಕಾರವೆತ್ತಿಲ್ಲ ಎಂದು ಅವರು ಆರೋಪಿಸಿದರು.
ಸಭೆಯಲ್ಲಿ ಎಸ್.ಡಿ.ಪಿ.ಐ ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎ.ರಫೀಕ್, ಸವಣೂರು ವಲಯ ಕಾರ್ಯದರ್ಶಿ ಅಶ್ರಫ್ ಜನತಾ ಸವಣೂರು ಗ್ರಾ.ಪಂ.ಸದಸ್ಯ ಅಬ್ದುಲ್ ರಝಾಕ್ ಕೆನರಾ, ತಾಲೂಕು ದಲಿತ ಸಂಘರ್ಷ ಸಮಿತಿ ಮುಖಂಡ ಬಾಬು ಎನ್ ಸವಣೂರು, ಎಸ್.ಡಿ.ಪಿ.ಐ ಸವಣೂರು ವಲಯಾಧ್ಯಕ್ಷ ಸಿದ್ದಿಕ್ ಅಲೆಕ್ಕಾಡಿ ಮತ್ತಿತರರು ಉಪಸ್ಥಿತರಿದ್ದರು.





