ಚುನಾವಣಾ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಡ್ಡಿ : ಖುರೇಶಿ
ಹೊಸದಿಲ್ಲಿ, ಫೆ.3: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಹೆಮ್ಮೆ ಪಡುವ ಹಲವು ಅಂಶಗಳಿವೆ. ಆದರೆ ಹಲವಾರು ಚುನಾವಣಾ ಸುಧಾರಣೆಗಳು ಸುದೀರ್ಘ ಕಾಲದಿಂದ ಬಾಕಿಯುಳಿದಿದ್ದು ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಥವಾ ನಿರಾಸಕ್ತಿ ಪ್ರಮುಖ ಕಾರಣವಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಶಿ ಅಭಿಪ್ರಾಯ ಪಟ್ಟಿದ್ದಾರೆ.
ಚುನಾವಣಾ ವ್ಯವಸ್ಥೆಯಲ್ಲಿರುವ ಕೆಲವು ಕೊರತೆಗಳನ್ನು ಅತ್ಯಗತ್ಯವಾಗಿ ಗಮನಿಸಿ ಅವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ಹೇಳಿದ್ದಾರೆ. ದೇಶದ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆಯ ಅನನ್ಯ ಪ್ರಯೋಗದ ಬಗ್ಗೆ ಅಧ್ಯಯನ ನಡೆಸಿದವರು, ಚುನಾವಣಾ ವಿಶ್ಲೇಷಕರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ಸರಕಾರಿ ಉದ್ಯೋಗಿಗಳು ಹಾಗೂ ಉದ್ದಿಮೆದಾರರು ಬರೆದಿರುವ ಲೇಖನಗಳ ಸಂಕಲನವನ್ನು ‘ದಿ ಗ್ರೇಟ್ ಮಾರ್ಚ್ ಆಫ್ ಡೆಮಾಕ್ರಸಿ: ಸೆವೆನ್ ಡಿಕೇಡ್ಸ್ ಆಫ್ ಇಂಡಿಯಾಸ್ ಇಲೆಕ್ಷನ್ಸ್ ’ ಎಂಬ ಹೆಸರಿನ ಕೃತಿಯಲ್ಲಿ ಖುರೇಶಿ ಸಂಪಾದಿಸಿದ್ದಾರೆ.
ಪೆಂಗ್ವಿನ್ ರ್ಯಾಂಡಮ್ ಹೌಸ್ ಪ್ರಕಟಿಸಿರುವ ಈ ಕೃತಿಯಲ್ಲಿ ಚುನಾವಣಾ ಆಯೋಗದ ವಿಕಸನ, ಪ್ರಥಮ ಮತದಾರರ ಪಟ್ಟಿ, ಚುನಾವಣಾ ನಿಯಮಗಳು, ಮತದಾರರಿಗೆ ತರಬೇತಿ ನೀಡಲು ಚುನಾವಣಾ ಆಯೋಗ ನಡೆಸುತ್ತಿರುವ ನಿರಂತರ ಪ್ರಯತ್ನ , ರಾಜಕೀಯ ಕ್ಷೇತ್ರದಲ್ಲಿ ಹಣ ಮತ್ತು ಅಪರಾಧ ಕೃತ್ಯದ ಪ್ರಭಾವ ಮುಂತಾದ ವೈವಿಧ್ಯಮಯ ವಿಷಯದ ಕುರಿತ ಲೇಖನಗಳಿವೆ. ಚುನಾವಣಾ ಪ್ರಚಾರದ ಕುರಿತು ಇರುವ ಆರ್ಥಿಕ ನಿಯಮಗಳನ್ನು ಸುಧಾರಣೆ ಮಾಡುವುದು, ರಾಜಕೀಯವನ್ನು ನಿರಪರಾಧೀಕರಣಗೊಳಿಸುವುದು, ಮುಖ್ಯ ಚುನಾವಣಾ ಆಯುಕ್ತರಂತಹ ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡುವಾಗ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳ ಬಗ್ಗೆ ಚುನಾವಣಾ ಆಯೋಗ ಹಲವು ಬಾರಿ ಸರಕಾರಕ್ಕೆ ಪತ್ರ ಬರೆದಿದೆ ಎಂದು ಖುರೇಶಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ರಕ್ಷಕನಂತೆ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗದ ಮಧ್ಯಪ್ರವೇಶದಿಂದ ಹಲವಾರು ಪ್ರಮುಖ ಸುಧಾರಣೆಗಳಾಗಿವೆ. ವರ್ಷಗಳು ಕಳೆದಂತೆಲ್ಲಾ ಹಲವಾರು ಹೊಸ ಮತ್ತು ಹಳೆಯ ಸವಾಲುಗಳು ಮತ್ತೆ ಗೋಚರಕ್ಕೆ ಬರುತ್ತಿದ್ದು ತ್ವರಿತ ಮತ್ತು ನಿರ್ಣಾಯಕ ಕ್ರಮಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದವರು ಹೇಳಿದ್ದಾರೆ.
ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಮತದಾರರ ಮೇಲೆ ಪ್ರಭಾವ ಬೀರಲು ಹಣ ಮತ್ತು ತೋಳ್ಬಲದ ಪ್ರಭಾವದ ಬಳಕೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದ್ದು ಇಂತಹ ಅವ್ಯವಹಾರಗಳನ್ನು ತಡೆಗಟ್ಟದಿದ್ದರೆ ಪ್ರಜಾಪ್ರಭುತ್ವದ ಚೈತನ್ಯ ನಾಶವಾಗಬಹುದು ಎಂದು ಹೇಳಿದ್ದಾರೆ.