ಮಹಾರಾಷ್ಟ್ರದ ಕಲಾವಿದ ಪಾಟೀಲ್ ಮುಡಿಗೇರಿದ ಸಿಐಎಂಎ ಪ್ರಶಸ್ತಿ

ಕೋಲ್ಕತಾ.ಫೆ.3: ಮಹಾರಾಷ್ಟ್ರದ ಯುವ ಕಲಾವಿದ ಶಶಿಕಾಂತ ಪಾಟೀಲ್ ಅವರು ಇಲ್ಲಿಯ ಸೆಂಟರ್ ಆಫ್ ಇಂಟರ್‌ನ್ಯಾಷನಲ್ ಮಾಡರ್ನ್ ಆರ್ಟ್(ಸಿಐಎಂಎ) ಕೊಡಮಾಡುವ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿಯು ಐದು ಲ.ರೂ.ಗಳ ನಗದು ಬಹುಮಾನವನ್ನೊಳಗೊಂಡಿದೆ.
ಶನಿವಾರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾತನಾಡಿದ ವಿಶ್ವಭಾರತಿಯ ಹಳೆಯ ವಿದ್ಯಾರ್ಥಿ ಪಾಟೀಲ್,ಇದು ತನ್ನ ಜೀವನದ ಮೊದಲ ಪ್ರಶಸ್ತಿಯಾಗಿದೆ,ನಂದಲಾಲ ಬೋಸ್ ಅವರ ವರ್ಣಚಿತ್ರಗಳು ಮತ್ತು ರಾಮಕಿಂಕರ ಬೈಜ್ ಅವರ ಕಲಾಕೃತಿಗಳು ತನಗೆ ಸ್ಫೂರ್ತಿಯನ್ನು ನೀಡಿದ್ದವು ಎಂದು ತಿಳಿಸಿದರು.
ತನ್ನ ‘ಪರಿವರ್ತನೆ’ ವರ್ಣ ಕಲಾಕೃತಿಗಾಗಿ ಪಾಟೀಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿಯು ಟ್ರೋಫಿಯನ್ನು ಒಳಗೊಂಡಿದ್ದು,ಪಾಟೀಲ್ ಅವರಿಗೆ ಏಕವ್ಯಕ್ತಿ ಕಲಾ ಪ್ರದರ್ಶನದ ಅವಕಾಶವನ್ನೂ ಒದಗಿಸಲಿದೆ.
ಸಿಐಎಂಎ ದೇಶಾದ್ಯಂತ ದೃಶ್ಯಕಲೆಗಳಲ್ಲಿ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದೊಂದಿಗೆ 20 ವರ್ಷಗಳ ಹಿಂದೆ ಈ ಪ್ರಶಸ್ತಿಗಳನ್ನು ಸ್ಥಾಪಿಸಿದೆ.
Next Story