ಪ್ರತಿಭಟನಕಾರರ ಅಭಿಪ್ರಾಯವನ್ನು ಗೌರವಿಸಬೇಕು: ಸುಡಾನ್ ಪ್ರಧಾನಿ
ಖಾರ್ಟೂಮ್, ಫೆ. 3: ಸರಕಾರದ ವಿರುದ್ಧ ಜನರು ನಡೆಸುತ್ತಿರುವ ಪ್ರತಿಭಟನೆಗಳನ್ನು ಗೌರವಿಸಬೇಕು ಎಂದು ಸುಡಾನ್ ಪ್ರಧಾನಿ ಮೌತಾಝ್ ಮೂಸಾ ಅಬ್ದುಲ್ಲಾ ಹೇಳಿದ್ದಾರೆ. ಆದರೆ, ಚುನಾವಣೆಯೊಂದೇ ಸರಕಾರದ ಹಣೆಬರಹವನ್ನು ನಿರ್ಧರಿಸಬಲ್ಲದು ಎಂದು ಅವರು ಪ್ರತಿಪಾದಿಸಿದ್ದಾರೆ.
‘‘ನನ್ನ ಪ್ರಕಾರ, ಪ್ರತಿಭಟನಕಾರರ ಅಭಿಪ್ರಾಯವನ್ನು ಗೌರವಿಸಬೇಕು’’ ಎಂದು ರಾಜಧಾನಿ ಖಾರ್ಟೂಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
‘‘ಅದು ಗೌರವಾರ್ಹ ಯುವ ಚಳವಳಿ. ಆದರೆ, ಸರಕಾರವನ್ನು ಚುನಾವಣೆಯ ಮೂಲಕ ಮಾತ್ರ ಬದಲಾಯಿಸಬಹುದು ಎನ್ನುವುದು ನನ್ನ ಮತ್ತು ನನ್ನ ಸರಕಾರದ ನಂಬಿಕೆ’’ ಎಂದರು.
ಬ್ರೆಡ್ ಬೆಲೆಯನ್ನು ಮೂರು ಪಟ್ಟು ಹೆಚ್ಚಿಸುವ ಘೋಷಣೆಯ ಬಳಿಕ, ಪೂರ್ವ ಆಫ್ರಿಕದ ದೇಶದಲ್ಲಿ ಡಿಸೆಂಬರ್ 19ರಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ.
ಈ ಪ್ರತಿಭಟನೆಗಳು ಬಳಿಕ, ಅಧ್ಯಕ್ಷ ಉಮರ್ ಅಲ್-ಬಶೀರ್‌ರ ಮೂರು ದಶಕಗಳ ಆಳ್ವಿಕೆಯ ವಿರುದ್ಧದ ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಿ ಮಾರ್ಪಟ್ಟಿವೆ.
Next Story