ಪೊಲೀಸ್ ಆಯುಕ್ತರ ಮನೆ ಮುಂದೆ ಹೈಡ್ರಾಮ: ಸಿಬಿಐ ಅಧಿಕಾರಿಗಳು ಪೊಲೀಸ್ ವಶಕ್ಕೆ

ಕೋಲ್ಕತಾ, ಫೆ.3: ರೋಸ್ ವ್ಯಾಲಿ ಮತ್ತು ಶಾರದಾ ಚಿಟ್ ಫಂಡ್ ಹಗರಣದ ಬಗ್ಗೆ ನಡೆಯುತ್ತಿರುವ ತನಿಖೆಯ ಅಂಗವಾಗಿ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆ ನಡೆಸಲು ಆಯುಕ್ತರ ನಿವಾಸಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ ಹಾಗೂ ಪೊಲೀಸರ ಮಧ್ಯೆ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ.
ರೋಸ್ ವ್ಯಾಲಿ ಮತ್ತು ಶಾರದಾ ಚಿಟ್ ಫಂಡ್ ಹಗರಣದ ಹಿನ್ನೆಲೆಯಲ್ಲಿ ರಾಜೀವ್ ಕುಮಾರ್ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಿಬಿಐ ಶನಿವಾರ ಹೇಳಿಕೆ ನೀಡಿತ್ತು. ಅದರಂತೆ ರವಿವಾರ ಸಂಜೆಯ ವೇಳೆಗೆ ಪೊಲೀಸ್ ಆಯುಕ್ತ ಕುಮಾರ್ ಮನೆಗೆ ಆಗಮಿಸಿದ ಸುಮಾರು 40 ಅಧಿಕಾರಿಗಳ ತಂಡವನ್ನು ಕುಮಾರ್ ಅವರ ನಿವಾಸದ ಹೊರಗೆ ತಡೆಹಿಡಿಯಲಾಯಿತು ಮತ್ತು ಕೆಲವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಪೊಲೀಸ್ ಆಯುಕ್ತ ಕುಮಾರ್ ಬೆಂಬಲಕ್ಕೆ ನಿಂತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಕೋಲ್ಕತಾದಲ್ಲಿರುವ ಕುಮಾರ್ ನಿವಾಸಕ್ಕೆ ಧಾವಿಸಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಮಮತಾ, ಕುಮಾರ್ ದೇಶದಲ್ಲಿರುವ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿದ್ದಾರೆ ಎಂದು ಹೇಳಿದ್ದರು. ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೆದರಿ ಅವರು ತಲೆಮರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಒಂದು ದಿನ ರಜೆ ಪಡೆದಿರುವುದನ್ನು ಹೊರತುಪಡಿಸಿ, ದಿನವಿಡೀ ಅವರು ಕಾರ್ಯನಿರ್ವಹಿಸುತ್ತಿದ್ದಾರೆ .
“ನೀವು ಸುಳ್ಳು ಪ್ರಸಾರ ಮಾಡುತ್ತಿದ್ದು ಸುಳ್ಳು ಎಂದೂ ನಿಜವಾಗದು” ಎಂದು ಮಮತಾ ಟ್ವೀಟ್ ಮಾಡಿದ್ದಾರೆ. ಬಿಜೆಪಿಯನ್ನು ಟೀಕಿಸಿರುವ ಹಿರಿಯ ಟಿಎಂಸಿ ಮುಖಂಡ ಡೆರೆಕ್ ಒ’ಬ್ರಿಯಾನ್, ಪೊಲೀಸ್ ಆಯುಕ್ತರ ಮನೆಗೆ 40 ಸಿಬಿಐ ಅಧಿಕಾರಿಗಳನ್ನು ಕಳುಹಿಸುವ ಮೂಲಕ ದಂಗೆಗೆ ಬಿಜೆಪಿ ಯೋಜನೆ ಹಾಕಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರದ ಅನುಮತಿ ಪಡೆಯದೆ ಸಿಬಿಐ ರಾಜ್ಯದಲ್ಲಿ ಯಾವುದೇ ತನಿಖೆ ಅಥವಾ ದಾಳಿ ನಡೆಸುವುದಕ್ಕೆ ನೀಡಲಾಗಿದ್ದ ಅನುಮತಿಯನ್ನು ಪಶ್ಚಿಮ ಬಂಗಾಳ ಇತ್ತೀಚೆಗೆ ಹಿಂದಕ್ಕೆ ಪಡೆದಿದ್ದ ಬಳಿಕ ಪ.ಬಂಗಾಳ ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರದ ಮಧ್ಯೆ ನಡೆದಿರುವ ಮೊತ್ತ ಮೊದಲ ಪ್ರಮುಖ ತಿಕ್ಕಾಟ ಇದಾಗಿದೆ.
ಸಾಮಾನ್ಯ ಒಪ್ಪಿಗೆ ಹಿಂದೆಗೆತ
1989ರಲ್ಲಿ ಸಿಬಿಐಗೆ ಅಂದಿನ ಎಡರಂಗ ಸರಕಾರ ನೀಡಿದ್ದ ಸಾಮಾನ್ಯ ಒಪ್ಪಿಗೆಯ ಪ್ರಕಾರ ಕೇಂದ್ರ ತನಿಖೆ ಸಂಸ್ಥೆ(ಸಿಬಿಐ) ರಾಜ್ಯ ಸರಕಾರದ ಒಪ್ಪಿಗೆ ಪಡೆಯದೆ ರಾಜ್ಯದಲ್ಲಿ ಯಾವುದೇ ವಿಚಾರಣೆ ನಡೆಸಬಹುದಾಗಿದೆ.
ಆದರೆ ಕಳೆದ ವರ್ಷದ ನವೆಂಬರ್‌ನಲ್ಲಿ ಸಾಮಾನ್ಯ ಒಪ್ಪಿಗೆ ಪ್ರಕ್ರಿಯೆಯನ್ನು ಮಮತಾ ಬ್ಯಾನರ್ಜಿ ಸರಕಾರ ಹಿಂಪಡೆದಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶವಿರುವ ತನಿಖೆಗಳನ್ನು ಹೊರತುಪಡಿಸಿ, ಇತರ ಯಾವುದೇ ತನಿಖೆ, ಅಥವಾ ವಿಚಾರಣೆಗೆ ರಾಜ್ಯ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.







