ಕಾರ್ಯಕ್ರಮ ನಡೆಸುವುದು ರಾಜಕೀಯ ಪಕ್ಷಗಳ ಸಾಂವಿಧಾನಿಕ ಹಕ್ಕು : ಕೆಎನ್ ತ್ರಿಪಾಠಿ

ಕೋಲ್ಕತಾ, ಫೆ.3: ಕಾರ್ಯಕ್ರಮ, ರ್ಯಾಲಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಸಂವಿಧಾನದಲ್ಲಿ ಹಕ್ಕು ಒದಗಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಕೆಎನ್ ತ್ರಿಪಾಠಿ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಹಿಂಸಾಚಾರವನ್ನು ಅವರು ಖಂಡಿಸಿದರು. ರಾಜಕೀಯ ಪಕ್ಷಗಳು ನಡೆಸುವ ರ್ಯಾಲಿ ಅಥವಾ ಯಾತ್ರೆಗಳನ್ನು ರಾಜ್ಯ ಸರಕಾರ ತಡೆಯುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ರಾಜಕೀಯ ಪಕ್ಷಗಳು ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಸಮಾಜದಲ್ಲಿ ಸಹಿಷ್ಣುತೆಗೆ ಪ್ರಾಧಾನ್ಯತೆಯಿದೆ . ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾನೂನನ್ನು ಪಾಲಿಸಿ ಶಾಂತಿ ಕಾಪಾಡುವಂತೆ ರಾಜ್ಯದ ಜನತೆಗೆ ತ್ರಿಪಾಠಿ ಕರೆ ನೀಡಿದರು. ಭಾರತ-ಬಾಂಗ್ಲಾ ಗಡಿಭಾಗದಿಂದ ಅಕ್ರಮವಾಗಿ ದೇಶದೊಳಗೆ ನುಸುಳುವವರನ್ನು ತಡೆಯಬೇಕು. ಅಕ್ರಮ ನುಸುಳುವಿಕೆ ತಡೆಯುವುದು ದೇಶದ ಹಿತಾಸಕ್ತಿಗೆ ಪೂರಕವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.





