ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಬಿಜೆಪಿಯಲ್ಲೇ ಪೈಪೋಟಿ: ಶುರುವಾಯಿತು ಟಿಕೆಟ್ ಫೈಟ್

ಡಿ.ವಿ.ಸದಾನಂದಗೌಡ- ಡಾ.ಎಚ್.ಎನ್.ಚಂದ್ರಶೇಖರ್
ಬೆಂಗಳೂರು, ಫೆ. 3: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಡಾ. ಎಚ್.ಎನ್.ಚಂದ್ರಶೇಖರ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಪಕ್ಷದ ಮುಖಂಡರು ಇದು ತಲೆನೋವಾಗಿ ಪರಿಣಮಿಸಿದೆ.
ಉತ್ತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಣಕ್ಕಿಳಿಯಲಿದ್ದೇನೆ ಎಂಬ ಸುದ್ದಿಯ ಬೆನ್ನಲ್ಲೆ ಕೇಂದ್ರ ಸಚಿವ ಸದಾನಂದಗೌಡ, ‘ಸೆಣಸಾಡಿದರೆ ಬಲಶಾಲಿಗಳ ಜೊತೆ ಸೆಣಸಾಡಬೇಕು. ನಾನು ದೇವೇಗೌಡರ ವಿರುದ್ಧ ಸ್ಪರ್ಧೆಗೆ ನಿಂತು ಗೆಲುವು ಸಾಧಿಸುತ್ತೇನೆ’ ಸವಾಲು ಹಾಕಿದ್ದಾರೆ.
ರವಿವಾರ ಮಲ್ಲೇಶ್ವರಂ ಖಾಸಗಿ ಹೊಟೇಲ್ನಲ್ಲಿ ಏರ್ಪಡಿಸಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಚುನಾವಣಾ ಸಿದ್ದತೆ, ಪಕ್ಷ ಸಂಘಟನೆ ಸಂಬಂಧ ಸಮಾಲೋಚನೆ ನಡೆಸಲಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಸದಾನಂದಗೌಡ ಹಾಗೂ ಚಂದ್ರಶೇಖರ್ ಮಧ್ಯೆ ಪೈಪೋಟಿ ಆರಂಭವಾಗಿದೆ.
ಹಾಲಿ ಸಂಸದ ಸದಾನಂದಗೌಡರ ಬದಲಿಗೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯದ ಮಧ್ಯೆ ಶೋಭಾ ಕರಂದ್ಲಾಜೆಯವರೂ ಈ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದು, ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಸೃಷ್ಟಿಯಾಗಿದೆ.
ಗೆಲುವು ನನ್ನದೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಮಗೆ ಹಿನ್ನೆಡೆಯಾಗಿತ್ತು. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದು, ಕ್ಷೇತ್ರದಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರಗಳು ಹಾಗೂ ಬೂತ್ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲಾಗಿದೆ ಸದಾನಂದಗೌಡ ಎಂದರು.
ಕ್ಷೇತ್ರದ ಕಾರ್ಯಕರ್ತರ ಸಭೆ ಶಕ್ತಿ ನೀಡಿದ್ದು, ಪ್ರತಿಬೂತ್ ಶಕ್ತಿ ಶಾಲಿಯನ್ನಾಗಿ ಮಾಡಲು ಹಾಗೂ ಎಲ್ಲ ವರ್ಗದ ಜನರನ್ನು ಮುಟ್ಟಲು ತೀರ್ಮಾನಿಸಲಾಗಿದೆ. ಜತೆಗೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಇತ್ತೀಚಿನ ಬಜೆಟ್ ಮತ್ತು ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದರು.
‘ನಾನೂ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಈ ಬಾರಿ ಯಾರಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾನು ಆಕಾಂಕ್ಷಿ ಎಂಬುದು ಹಾಲಿ ಸಂಸದ ಡಿವಿಎಸ್ ಅವರಿಗೂ ಗೊತ್ತು. ರೈತ ಮೋರ್ಚಾ ಸಭೆ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಗೆ ಹೋಗಿಲ್ಲ. ನಾನು ಕ್ಷೇತ್ರದ ನಾಯಕರ ಜತೆ ಸಭೆ ನಡೆಸಿದ್ದು, ಕಣಕ್ಕಿಳಿಯಲು ಪಕ್ಷ ಸಂಘಟನೆ ಮಾಡಿದ್ದೇನೆ’
-ಡಾ.ಎಚ್.ಎನ್.ಚಂದ್ರಶೇಖರ್, ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ







