ಕೋಟ್ಯಾಂತರ ರೂ. ವಂಚನೆ ಆರೋಪ: ಲೆಕ್ಕಾಧಿಕಾರಿ ವಿರುದ್ಧ ದೂರು

ಬೆಂಗಳೂರು, ಫೆ.3: ಖಾಸಗಿ ಕಂಪೆನಿಯ ಲೆಕ್ಕಾಧಿಕಾರಿಯೊರ್ವ ನೌಕರರಿಗೆ ನೀಡುತ್ತಿದ್ದ ವೇತನವನ್ನು ದುರುಪಯೋಗಪಡಿಸಿಕೊಂಡು 1 ಕೋಟಿಗೂ ಅಧಿಕ ಮೊತ್ತ ವಂಚಿಸಿರುವ ಆರೋಪ ಸಂಬಂಧ ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಧಿ ಕ್ಲಾತಿಂಗ್ ಹೆಸರಿನ ಕಂಪೆನಿಯ ಲೆಕ್ಕಾಧಿಕಾರಿ ಪ್ರದೀಪ್ ಎಂಬವರ ವಿರುದ್ಧ ವಂಚನೆಯ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
2012ರಲ್ಲಿ ವಿಧಿ ಕ್ಲಾತಿಂಗ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ ಪ್ರದೀಪ್ ಒಂದು ವರ್ಷಗಳವರೆಗೂ ನಂಬಿಕಸ್ಥನಾಗಿಯೇ ಕಾರ್ಯ ನಿರ್ವಹಿಸಿ ಮಾಲಕ ಗೌತಮ್ ಜೈನ್ ಅವರಿಗೆ ತಿಳಿಯದಂತೆ ವಂಚನೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಕಂಪೆನಿಯಲ್ಲಿ ಸುಮಾರು 350 ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು ಅಲ್ಲಿನ ನೌಕರರಿಗೆ ಈತನೇ ವೇತನ ಹಾಕುತ್ತಿದ್ದ. ಆದರೆ, ಈ ವೇಳೆ ನಕಲಿ ಲೆಕ್ಕಪತ್ರ ಸೃಷ್ಟಿಸಿ ವೇತನದ ರೂಪದಲ್ಲಿ ಹಣ ಹಾಕಿದ್ದಾನೆ. 2013ರಿಂದ ಇದುವರೆಗೂ ವಂಚಿಸಿರುವ ಪ್ರದೀಪ್ ಕೃತ್ಯವು, ಲೆಕ್ಕಪರಿಶೋಧನೆ ವೇಳೆ ಬಯಲಾಗಿದೆ ಎನ್ನಲಾಗಿದೆ.
ಇದುವರೆಗೂ ಆರೋಪಿ ಪ್ರದೀಪ್ ಸುಮಾರು 1ಕೋಟಿ 38ಲಕ್ಷ ರೂ. ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.







