ಗುಂಪಿನಿಂದ ಹತ್ಯೆಗಳ ಹಿಂದಿನ ದ್ವೇಷದ ನಿಗೂಢತೆ ಭೇದಿಸಲಿರುವ ಪುಸ್ತಕ

ಹೊಸದಿಲ್ಲಿ,ಫೆ.3: ಗುಂಪು ಹಿಂಸಾಚಾರದ ಸಂತ್ರಸ್ತರ ಕಥನಗಳನ್ನು ಸಂಕಲಿಸಿರುವ ನೂತನ ಪುಸ್ತಕವೊಂದು,ಇಂತಹ ಹಿಂಸಾಚಾರಗಳಲ್ಲಿ ಭಾಗಿಯಾಗುವವರು ನಿರ್ಭೀತಿಯಿಂದ ಕಾನೂನುಗಳನ್ನು ಉಲ್ಲಂಘಿಸಲು ಕಾರಣಗಳೇನು ಎನ್ನುವುದನ್ನು ವಿಶ್ಲೇಷಿಸಲು ಪ್ರಯತ್ನಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಗುಂಪಿನಿಂದ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು,ಇದು ಅಪಾಯದ ಗಂಟೆಯನ್ನು ಬಾರಿಸುತ್ತಿದೆ ಮತ್ತು ಈ ಪ್ರವೃತ್ತಿಯು ಭಾರತದ ಜಾತ್ಯತೀತತೆ ಮತ್ತು ಸಂವಿಧಾನವನ್ನು ಸತ್ವಪರೀಕ್ಷೆಗೊಳಪಡಿಸಿವೆ ಎಂದು ಝಿಯಾವುಸ್ಸಲಾಂ ಅವರು ತನ್ನ ‘ಲಿಂಚ್ ಫೈಲ್ಸ್ : ದಿ ಫರ್‌ಗಾಟನ್ ಸಾಗಾ ಆಫ್ ವಿಕ್ಟಿಮ್ಸ್ ಆಫ್ ಹೇಟ್ ಕ್ರೈಮ್’ ಪುಸ್ತಕದಲ್ಲಿ ಹೇಳಿದ್ದಾರೆ.
ಗುಂಪು ದಿಢೀರ್ ನ್ಯಾಯನಿರ್ಧಾರವನ್ನು ನೀಡುವುದು ನಮ್ಮ ಸಂವಿಧಾನ ನಿರ್ಮಾತೃರು ಯೋಜಿಸಿದ್ದ ರೀತಿಯಲ್ಲ ಎಂದಿರುವ ಅವರು, ದಾದ್ರಿ ಮತ್ತು ಉನಾದಿಂದ ಆಲ್ವಾರ್ ಮತ್ತು ಹಾಪುರ್‌ವರೆಗೆ ಹಾಗೂ ರಾಜಕೋಟ್‌ನಿಂದ ದಿಮಾಪುರವರೆಗೆ ಗುಂಪುಹತ್ಯೆಗಳ ಪ್ರತಿಯೊಂದೂ ವರದಿಯು ಭದ್ರತೆಯ ಕೊರತೆಯನ್ನು ಬೆಟ್ಟು ಮಾಡುತ್ತಿದೆ ಎಂದಿದ್ದಾರೆ.
ಗೋ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾರ್ಯತಂತ್ರವು ಒಂದೇ ಆಗಿದೆ,‘ಸಾಮಾನ್ಯ ಗರಿಷ್ಠ ಕಾರ್ಯಕ್ರಮ’ವು ಹೆಚ್ಚುಕಡಿಮೆ ಒಂದೇ ಆಗಿದೆ. ಹೆಚ್ಚಿನೆಲ್ಲ ಪ್ರಕರಣಗಳಲ್ಲಿ ಇದು ಆಧಾರವಿಲ್ಲದ ಗೋ ಕಳ್ಳಸಾಗಾಣಿಕೆ ಅಥವಾ ಗೋಹತ್ಯೆ ಆರೋಪದೊಂದಿಗೇ ಆರಂಭಗೊಳ್ಳುತ್ತದೆ ಎಂದು ಅವರು ಪುಸ್ತಕದಲ್ಲಿ ಬರೆದಿದ್ದಾರೆ.
ಗೋರಕ್ಷಕರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಲು ಕಾರಣಗಳೇನು? ಜನಸಂಖ್ಯಾ ಸ್ಫೋಟ,ಸಂಪನ್ಮೂಲಗಳ ಕೊರತೆ,ಸೀಮಿತ ಉದ್ಯೋಗಾವಕಾಶಗಳು,ಶ್ರೀಮಂತರು ಮತು ಬಡವರ ನಡುವೆ ಹೆಚ್ಚುತ್ತಿರುವ ಅಂತರ ಮತ್ತು ವ್ಯಾಪಕ ಭ್ರಷ್ಟಾಚಾರದಿಂದಾಗಿ ಹುಟ್ಟಿಕೊಂಡಿರುವ ನಿರಾಶ ಭಾವನೆಯಿಂದ ಪೀಡಿತ ನಮ್ಮಂತಹ ಸಮಾಜದಲ್ಲಿ ಜನರು ತೀವ್ರ ಅಸಹಾಯಕತೆ ಮತ್ತು ಹತಾಶೆಯನ್ನು ಬೆಳೆಸಿಕೊಳ್ಳುತ್ತಾರೆ. ಪರಿಣಾಮವಾಗಿ ಅವರಲ್ಲಿ ಸಿಟ್ಟು ಉಂಟಾಗುತ್ತದೆ ಮತ್ತು ಇದು ಗುಂಪು ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದಿದ್ದಾರೆ.
ಗುಂಪಿನಿಂದ ಹತ್ಯೆಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಪುಸ್ತಕದಲ್ಲಿ ಚರ್ಚಿಸಿರುವ ಅವರು,ಇದು ಸ್ವಲ್ಪ ಭರವಸೆಯನ್ನು ಮೂಡಿಸಿದೆ ಎಂದಿದ್ದಾರೆ.







