ಬಜ್ಪೆಯಲ್ಲಿ ಚಿರತೆ ಪ್ರತ್ಯಕ್ಷ; ಭೀತಿಯಲ್ಲಿ ಗ್ರಾಮಸ್ಥರು
ಎರಡು ಬೋನು ಇಟ್ಟ ಅರಣ್ಯ ಇಲಾಖೆ
ಮಂಗಳೂರು, ಫೆ.3: ನಗರದ ಹೊರವಲಯ ಬಜ್ಪೆ ವ್ಯಾಪ್ತಿಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿರತೆಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು ಎನ್ನಲಾಗಿದೆ. ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆಯು ಎರಡು ಬೋನುಗಳನ್ನು ಇಟ್ಟು ಚಿರತೆಯನ್ನು ಹಿಡಿಯಲು ಬಲೆ ಬೀಸಿದೆ.
ಮಂಗಳೂರು ತಾಲೂಕಿನ ಕಂದಾವರ ಹಾಗೂ ಎಡಪದವು ಎಂಬಲ್ಲಿ ಚಿರತೆಯನ್ನು ಹಿಡಿಯಲು ಎರಡು ಬೋನುಗಳನ್ನು ಇಡಲಾಗಿದೆ. ಆದರೆ ಇಲ್ಲಿಯವರೆಗೆ ಚಿರತೆಯ ಯಾವುದೇ ಸುಳಿವು ಕಂಡುಬಂದಿಲ್ಲ ಎಂದು ಮಂಗಳೂರು ಉಪವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಸುಧೀರ್ ಅವರು ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.
ಬಜ್ಪೆ ಸುತ್ತ ಮುತ್ತಲಿನ ಪ್ರದೇಶಗಳಾದ ಗಂಜಿಮಠ, ಕುಪ್ಪೆಪದವು, ಅಡ್ಯಾರ್ ಮತ್ತು ಮಲ್ಲೂರು ವ್ಯಾಪ್ತಿಯ ಗ್ರಾಮಸ್ಥರು ರಸ್ತೆಯ ಇಕ್ಕೆಲಗಳಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ಸುರಿದು ಚಿರತೆಯ ಹಿಡಿಯಲು ಯತ್ನಿಸುತ್ತಿದ್ದಾರೆ. ಕೆಲವೆಡೆ ಮಾಂಸದ ತ್ಯಾಜ್ಯವನ್ನು ಪ್ರಾಣಿಗಳು ತಿಂದ ಕುರುಹು ಕಂಡುಬಂದಿದೆ. ಆದರೆ ಆ ಪ್ರಾಣಿ ಚಿರತೆಯೇ ಎನ್ನುವುದು ಖಾತ್ರಿಯಾಗಿಲ್ಲ ಎಂದರು.
ಒಂದು ವೇಳೆ ಚಿರತೆಯು ಪ್ರತ್ಯಕ್ಷವಾಗಿದ್ದಲ್ಲಿ ಅದು ಒಂದೇ ಜಾಗದಲ್ಲಿ ಇರುವುದಿಲ್ಲ. ಚಿರತೆ ಸೋಮವಾರ ಬೋನಿನಲ್ಲಿ ಸೆರೆಯಾಗದಿದ್ದಲ್ಲಿ ಮತ್ತೊಂದೆಡೆ ಬೋನುಗಳನ್ನು ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.







