4,000ಕ್ಕೂ ಅಧಿಕ ನಗರಗಳು ಬಯಲುಶೌಚ ಮುಕ್ತ: ಕೇಂದ್ರ

ಹೊಸದಿಲ್ಲಿ,ಫೆ.3: ಸ್ವಚ್ಛ ಭಾರತ ಅಭಿಯಾನದಡಿ 4,000ಕ್ಕೂ ಅಧಿಕ ನಗರಗಳನ್ನು ಬಯಲುಶೌಚ ಮುಕ್ತವೆಂದು ಘೋಷಿಸಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಒಟ್ಟು 4,378 ನಗರಗಳ ಪೈಕಿ 4,140 ನಗರಗಳನ್ನು ಬಯಲು ಶೌಚ ಮುಕ್ತ ಎಂದು ಈಗಾಗಲೇ ಘೋಷಿಸಲಾಗಿದೆ. ಮುಂದಿನ ತಿಂಗಳ ವೇಳೆಗೆ ಹೆಚ್ಚುಕಡಿಮೆ ಎಲ್ಲ ನಗರಗಳು ಬಯಲು ಶೌಚ ಮುಕ್ತಗೊಳ್ಳಲಿವೆ ಎಂದರು.
62,42,220 ಪ್ರತ್ಯೇಕ ಶೌಚಾಲಯಗಳ ನಿರ್ಮಾಣದ ಗುರಿ ಹೊಂದಲಾಗಿದ್ದು,ಈ ಪೈಕಿ ಶೇ.94ಕ್ಕೂ ಅಧಿಕ ಶೌಚಾಲಯಗಳು ಈಗಾಗಲೇ ನಿರ್ಮಾಣಗೊಂಡಿವೆ. ಐದು ಲಕ್ಷಕ್ಕೂ ಅಧಿಕ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಇಂತಹ ಶೌಚಾಲಯಗಳ ತನ್ನ ಗುರಿಯನ್ನು ಸಚಿವಾಲಯವು ಶೇ.100ರಷ್ಟು ಸಾಧಿಸಿದೆ. 84,229 ಮುನ್ಸಿಪಲ್ ವಾರ್ಡ್‌ಗಳ ಪೈಕಿ 72,503 ವಾರ್ಡ್‌ಗಳಲ್ಲಿ ಮನೆಮನೆ ತ್ಯಾಜ್ಯ ಸಂಗ್ರಹ ಕಾರ್ಯ ನಡೆಯುತ್ತಿದ್ದು,ಶೇ.86ರಷ್ಟು ಗುರಿಸಾಧನೆಯಾಗಿದೆ ಎಂದರು.
2014ರಲ್ಲಿ ಶೇ.14ರಷ್ಟಿದ್ದ ಘನತ್ಯಾಜ್ಯ ವೈಜ್ಞಾನಿಕ ಸಂಸ್ಕರಣೆಯು ಈಗ ಶೇ.50ಕ್ಕೇರಿದೆ ಎಂದೂ ಅವರು ತಿಳಿಸಿದರು.





