ಭಾರತವನ್ನು ಟೀಕಿಸಿದ ಆರೋಪ: ಹೋರಾಟಗಾರ್ತಿ ಕೌಶಲ್ಯಾ ಉದ್ಯೋಗದಿಂದ ಅಮಾನತು

ಚೆನ್ನೈ,ಫೆ.3: ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಭಾರತವನ್ನು ಟೀಕಿಸಿದ ಕಾರಣಕ್ಕೆ ಜಾತಿವಿರೋಧಿ ಹೋರಾಟಗಾರ್ತಿ ಕೌಶಲ್ಯಾರನ್ನು ತಮಿಳುನಾಡಿದ ನೀಲಗಿರಿ ಜಿಲ್ಲೆಯಲ್ಲಿರುವ ವೆಲ್ಲಿಂಗ್ಟನ್ ಕಾಂಟೊನ್ಮೆಂಟ್ ಬೋರ್ಡ್ ಉದ್ಯೋಗದಿಂದ ಅಮಾನತುಗೊಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ರವಿವಾರ ವರದಿ ಮಾಡಿದೆ.
ಕಂಟೊನ್ಮೆಂಟ್ ಬೋರ್ಡ್‌ನಲ್ಲಿ ಆಕೆ ಗುಮಾಸ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು. ದಕ್ಷಿಣ ಭಾರತದ ಪ್ರಬಲ ಜಾತಿಯಾಗಿರುವ ತೇವರ್ ಸಮುದಾಯಕ್ಕೆ ಸೇರಿರುವ ಕೌಶಲ್ಯಾರ ಮೊದಲ ಪತಿ ದಲಿತ ಸಮುದಾಯದವರಾಗಿದ್ದು, 2016ರ ಮಾರ್ಚ್‌ನಲ್ಲಿ ಹತ್ಯೆಗೀಡಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಕೌಶಲ್ಯರ ತಂದೆ ಸೇರಿದಂತೆ ಆರು ಮಂದಿಗೆ 2017ರ ಡಿಸೆಂಬರ್‌ನಲ್ಲಿ ಮರಣ ದಂಡನೆ ವಿಧಿಸಿತ್ತು.
ಸಂವಿಧಾನದ ಪ್ರಕಾರ ಭಾರತವನ್ನು ಒಕ್ಕೂಟವೆಂದು ಪರಿಗಣಿಸಲಾಗಿದೆ, ದೇಶವೆಂದಲ್ಲ. ಇದನ್ನು ಗಮನಿಸಿದರೆ, ಇದನ್ನು ದೇಶವೆಂದು ಕರೆಯಲು ಹೇಗೆ ಸಾಧ್ಯ?, ಇದೇ ಆಧಾರದಲ್ಲಿ ನಾನು ತಮಿಳುನಾಡನ್ನು ರಾಜ್ಯವೆಂದು ಒಪ್ಪಲು ಸಿದ್ಧಳಿಲ್ಲ. ಜೊತೆಗೆ ತಮಿಳುನಾಡನ್ನು ಭಾರತವು ಎಲ್ಲಾ ವಿಧಗಳಲ್ಲೂ ನಿರ್ಲಕ್ಷಿಸಿದೆ ಎಂದು ಕೌಶಲ್ಯಾ ಅಭಿಪ್ರಾಯಿಸಿದ್ದರು. ಕೌಶಲ್ಯಾರ ದೃಷ್ಟಿಕೋನ ದ್ವೇಷ ಭಾಷಣಕ್ಕೆ ಸಮವಾಗಿದೆ. ಆಕೆಯ ವಿರುದ್ಧ ತನಿಖೆ ಸಂಪೂರ್ಣಗೊಳ್ಳುವವರೆಗೆ ಆಕೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಲು ಬೋರ್ಡ್ ನಿರ್ಧರಿಸಿದೆ. ಈ ವಿಷಯದಲ್ಲಿ ವಿವರಣೆಯ ನೀಡುವಂತೆ ಆಕೆಗೆ ಸೂಚಿಸಲಾಗಿದೆ ಎಂದು ವೆಲ್ಲಿಂಗ್ಟನ್ ಕಂಟೊನ್ಮೆಂಟ್ ಬೋರ್ಡ್‌ನ ಕಾರ್ಯಕಾರಿ ಅಧಿಕಾರಿ ಹರೀಶ್ ವರ್ಮಾ ತಿಳಿಸಿದ್ದಾರೆ.







