ರಣಜಿ ಟ್ರೋಫಿ ಫೈನಲ್: ಮೊದಲ ದಿನ ಸೌರಾಷ್ಟ್ರ ಮೇಲುಗೈ
►ಜೈದೇವ್ ಸಾರಥ್ಯದಲ್ಲಿ ಬೌಲರ್‌ಗಳ ಮೆರೆದಾಟ ►ವಿದರ್ಭ ಪ್ರ. ಇನಿಂಗ್ಸ್ 200/7

ನಾಗ್ಪುರ, ಫೆ.3: ನಾಯಕ ಜೈದೇವ್ ಉನಾದ್ಕತ್ ನೇತೃತ್ವದ ಸೌರಾಷ್ಟ್ರ ಬೌಲಿಂಗ್ ದಾಳಿಗೆ ತತ್ತರಿಸಿದ ಚಾಂಪಿಯನ್ ವಿದರ್ಭ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 200 ರನ್ ಗಳಿಸಿ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಇಲ್ಲಿಯ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ರಥಮ ದಿನದಾಟವಾದ ರವಿವಾರ ಟಾಸ್ ಗೆದ್ದ ವಿದರ್ಭ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ತಂಡದ ಈ ನಿರ್ಧಾರ ತಪ್ಪು ಎಂದು ದಾಂಡಿಗರು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದಾಗ ಅರಿವಾಯಿತು. ಆತಿಥೇಯ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ಫೈಝ್ ಫಝಲ್(16) ಹಾಗೂ ಸಂಜಯ್ ರಾಮಸ್ವಾಮಿ(2) ತಂಡದ ಮೊತ್ತ 29 ರನ್ ಆಗುವಷ್ಟರಲ್ಲಿ ವಿಕೆಟ್ ಕೈಚೆಲ್ಲಿದರು. ಉತ್ತಮವಾಗಿ ಆಡುತ್ತಿದ್ದ ಫೈಝ್ ರನೌಟ್ ಆಗಿ ಪೆವಿಲಿಯನ್ ಸೇರಿದರೆ, ಸಂಜಯ್ ಅವರು ಉನಾದ್ಕತ್‌ಗೆ ಮೊದಲ ಬಲಿಯಾದರು.
ಆ ಬಳಿಕ ಭರವಸೆಯ ಆಟಗಾರ ವಸೀಂ ಜಾಫರ್ (23) ಇನಿಂಗ್ಸ್ ಕಟ್ಟುವ ಕಾಯಕದಲ್ಲಿ ತೊಡಗಿಕೊಂಡರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಉನಾದ್ಕತ್ ಅವರು ಜಾಫರ್ ರೂಪದಲ್ಲಿ ತಮ್ಮ ಎರಡನೇ ವಿಕೆಟ್ ಪಡೆದು ಸಂಭ್ರಮಿಸಿದರು. ದೈತ್ಯ ಆಟಗಾರರಾದ ಫಝಲ್ ಹಾಗೂ ವಸೀಂ ಜಾಫರ್‌ರನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಉನಾದ್ಕತ್ ವಿದರ್ಭ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ್ದು, ಪಂದ್ಯಕ್ಕೆ ದೊರೆತ ಮೊದಲ ತಿರುವಾಯಿತು. ಮೋಹಿತ್ ಕಾಳೆ(35) ಹಾಗೂ ಗಣೇಶ್ ಸತೀಶ್(35) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 46 ರನ್ ಸೇರಿಸಿದಾಗ ತಂಡದ ಮೊತ್ತ ಶತಕದ ಗಡಿ ದಾಟಿತು. ಇವರಿಬ್ಬರು ಕ್ರಮವಾಗಿ ಮಕ್ವಾನಾ ಹಾಗೂ ಮಂಕಡ್‌ಗೆ ವಿಕೆಟ್ ಒಪ್ಪಿಸಿದರು.
ವಿಕೆಟ್ ಕೀಪರ್ ದಾಂಡಿಗ ಅಕ್ಷಯ್ ವಾಡ್ಕರ್(45) ಪ್ರಥಮ ದಿನದಾಟದಲ್ಲಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರ ಎನಿಸಿದರು. ಆದಿತ್ಯ ಸರ್ವಾಟೆ ಶೂನ್ಯ ಸುತ್ತಿದರು. ಅಕ್ಷಯ್ ಕರ್ನೆವಾರ್(31) ಹಾಗೂ ಅಕ್ಷಯ್ ವಕಾರೆ(0) ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸೌರಾಷ್ಟ್ರ ಪರ ಉತ್ತಮ ದಾಳಿ ಸಂಘಟಿಸಿದ ಉನಾದ್ಕತ್ 2 ವಿಕೆಟ್ ಪಡೆದರೆ, ಚೇತನ್ ಸಕಾರಿಯಾ, ಪ್ರೇರಕ್ ಮಂಕಡ್, ಧರ್ಮೇಂದ್ರ ಸಿಂಹ ಜಡೇಜ ಹಾಗೂ ಕಮಲೇಶ್ ಮಕ್ವಾನಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡಿದ್ದಾರೆ.







