ಬಾರ್ಸಿಲೋನ-ವೆಲೆನ್ಸಿಯಾ ಪಂದ್ಯ ರೋಚಕ ಡ್ರಾ
ಲಾ ಲಿಗ ಟೂರ್ನಿ: ಮೆಸ್ಸಿ ಅವಳಿ ಗೋಲು

ಮ್ಯಾಡ್ರಿಡ್, ಫೆ.3: ಸ್ಪಾನಿಶ್ ಲಾ ಲಿಗ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಅವಳಿ ಗೋಲು ಗಳಿಸಿದ ಲಿಯೊನೆಲ್ ಮೆಸ್ಸಿ ನೆರವಿನಿಂದ 0-2 ಹಿನ್ನಡೆಯಿಂದ ಚೇತರಿಸಿಕೊಂಡ ಬಾರ್ಸಿಲೋನ ತಂಡ ವೆಲೆನ್ಸಿಯಾ ತಂಡದ ವಿರುದ್ಧ 2-2 ಅಂತರದಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶನಿವಾರ ರಾತ್ರಿ ನೌಕ್ಯಾಂಪ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ವೆಲೆನ್ಸಿಯಾ ತಂಡದ ಪರ ಕೆವಿನ್ ಗಾಮೆರೊ 24ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, ಡೇನಿಯಲ್ ಪಾರೆಜೊ 32ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
39ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿದ ಮೆಸ್ಸಿ ಅವರು ಬಾರ್ಸಿಲೋನ ತಿರುಗೇಟು ನೀಡಲು ನೆರವಾದರು. ಮೆಸ್ಸಿ ಲಾ ಲಿಗ ಇತಿಹಾಸದಲ್ಲಿ ಪೆನಾಲ್ಟಿ ಮೂಲಕ ಗರಿಷ್ಠ ಗೋಲು(50) ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಕ್ರಿಸ್ಟಿಯಾನೊ ರೊನಾಲ್ಡೊ(61) ಹಾಗೂ ಹ್ಯೂಗೊ ಸ್ಯಾಂಚೆಝ್(56) ಪೆನಾಲ್ಟಿ ಕಾರ್ನರ್‌ನಲ್ಲಿ ಗರಿಷ್ಠ ಗೋಲು ಗಳಿಸಿದ ಇನ್ನಿಬ್ಬರು ಸಾಧಕರು. 64ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದ ಮೆಸ್ಸಿ ಬಾರ್ಸಿಲೋನ 2-2 ರಿಂದ ಡ್ರಾ ಸಾಧಿಸಲು ಪ್ರಮುಖ ಕಾಣಿಕೆ ನೀಡಿದರು.
ಎರಡು ಗೋಲು ಬಾರಿಸಿರುವ ಮೆಸ್ಸಿ ಯುರೋಪ್‌ನ ಅಗ್ರ ಲೀಗ್‌ನ ಪೈಕಿ ಈ ಋತುವಿನಲ್ಲಿ ಗರಿಷ್ಠ ಗೋಲುಗಳನ್ನು(20)ಗಳಿಸಿದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ಮೆಸ್ಸಿ ಆಟದ ವೇಳೆ ಗಾಯದ ಸಮಸ್ಯೆಗೆ ಒಳಗಾದರು. ಆದಾಗ್ಯೂ ಬುಧವಾರ ರಿಯಲ್ ಮ್ಯಾಡ್ರಿಡ್ ವಿರುದ್ಧ ನಡೆಯಲಿರುವ ಮೊದಲ ಹಂತದ ಸೆಮಿ ಫೈನಲ್‌ಗೆ ಮೊದಲು ಫಿಟ್ ಆಗುವ ನಿರೀಕ್ಷೆಯಿದೆ.







