3ನೇ ಟಿ20: ಪಾಕ್ ವನಿತೆಯರ ಗೆಲುವಿನ ನಗೆ

ಕರಾಚಿ, ಫೆ.3: ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 12 ರನ್‌ಗಳಿಂದ ಮಣಿಸಿದ ಪಾಕಿಸ್ತಾನ ಮಹಿಳಾ ತಂಡ ಮೂರು ಪಂದ್ಯಗಳ ಸರಣಿಯನ್ನು ಸಮಾಧಾನಕರ ಜಯದೊಂದಿಗೆ ಕೊನೆಗೊಳಿಸಿದೆ.
ಇಲ್ಲಿಯ ಸೌತ್ ಎಂಡ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 150 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಆ ಬಳಿಕ ವೆಸ್ಟ್ ಇಂಡೀಸ್ ತಂಡವನ್ನು 138 ರನ್‌ಗಳಿಗೆ ನಿಯತ್ರಿಸುವಲ್ಲಿ ಯಶಸ್ವಿಯಾಯಿತು. ಪಾಕಿಸ್ತಾನ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ ನಿಧಾ ದರ್ ಅರ್ಧಶತಕ ಸಿಡಿಸಿದರೆ, ಉಮೈಮಾ ಸೋಹೈಲ್(28) ರನ್ ಗಳಿಸಿದರು. ವೆಸ್ಟ್ ಇಂಡಿಸ್ ಪರ ದಿಯಾಂದ್ರ ದಾಟಿನ್(46) ಹಾಗೂ ನತಾಶಾ ಮೆಕ್ಲಿನ್(26) ಉತ್ತಮ ಮೊತ್ತ ದಾಖಲಿಸಿದರು. ಪಾಕ್ ಪರ ಸ್ಪಿನ್ನರ್ ಅನಮ್ ಅಮಿನ್(34ಕ್ಕೆ 3) ಹಾಗೂ ಸನಾ ಮಿರ್(21ಕ್ಕೆ 2) ಐದು ವಿಕೆಟ್ ಹಂಚಿಕೊಂಡರು. 2011/12ರ ಬಳಿಕ ಪಾಕಿಸ್ತಾನ ಮಹಿಳಾ ತಂಡ ಮೊದಲ ಬಾರಿ ವಿಂಡೀಸ್ ವಿರುದ್ಧ ಟಿ20 ಪಂದ್ಯ ಜಯಸಿದ ಸಾಧನೆ ಮಾಡಿತು. ಅಲ್ಲದೆ ಕೆರಿಬಿಯನ್ ಪಡೆಯಿಂದ ಕ್ಲೀನ್‌ಸ್ವೀಪ್ ಒಳಗಾಗುವ ಮುಖಭಂಗವನ್ನು ತಪ್ಪಿಸಿಕೊಂಡಿತು. ವೆಸ್ಟ್ ಇಂಡೀಸ್ ಮೊದಲು ಎರಡು ಪಂದ್ಯಗಳನ್ನು ಜಯಿಸಿತ್ತು.
ಸದ್ಯ ಉಭಯ ತಂಡಗಳು ವಿಶ್ವಕಪ್ ಸ್ಪರ್ಧೆಗೆ ಐಸಿಸಿಯ ಅರ್ಹತಾ ಭಾಗವಾಗಿ ಏಕದಿನ ಸರಣಿಯನ್ನಾಡಲು ದುಬೈಗೆ ಪ್ರಯಾಣ ಬೆಳೆಸಲಿವೆ.





