ಮೋದಿ ಮೇಲಿನ ಪ್ರೀತಿಗೆ ವಿವಾಹವಾದ ಜೋಡಿಯ ದಾಂಪತ್ಯದಲ್ಲಿ ಬಿರುಕು
ಪತಿಯಿಂದ ಕಿರುಕುಳ ಎಂದ ಪತ್ನಿ

ಅಹಮದಾಬಾದ್,ಫೆ.3: ಪ್ರಧಾನಿ ಮೋದಿ ಬಗ್ಗೆ ಪ್ರೀತಿ ಹೊಂದಿದ್ದ ಕಾರಣಕ್ಕೆ ಸತಿಪತಿಗಳಾಗಲು ಬಯಸಿ ವಿವಾಹವಾದ ಜೋಡಿಯ ಜೀವನದಲ್ಲಿ ವಿವಾಹವಾದ ಕೆಲವೇ ದಿನಗಳಲ್ಲಿ ಸಮಸ್ಯೆ ತಲೆದೋರಿದ್ದು ಪತಿಯ ವಿರುದ್ಧ ಪತ್ನಿ ಕಿರುಕುಳ ಆರೋಪವನ್ನು ಹೊರಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಗುಜರಾತ್ ಮೂಲದ ಜಯ್ ದಾವೆ ವಿರುದ್ಧ ಆತನ ಪತ್ನಿ ಅಲ್ಪಿಕಾ ಪಾಂಡೆ ಕಿರುಕುಳ ಮತ್ತು ದೌರ್ಜನ್ಯದ ಆರೋಪ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ, ಬಿಜೆಪಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪ್ರಚಾರಕ್ಕಾಗಿ ದಾವೆ ಅಲ್ಪಿಕಾ ಭಾವಚಿತ್ರವನ್ನು ಬಳಸಿರುವುದಾಗಿಯೂ ಆಕೆ ಆರೋಪಿಸಿದ್ದಾರೆ. ಕೆಲದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಟ್ವೀಟ್‌ವೊಂದಕ್ಕೆ ದಾವೆ ಕಮೆಂಟ್ ಮಾಡಿದ್ದರು. ಈ ಕಮೆಂಟ್‌ಗೆ ಅಲ್ಪಿಕಾ ಲೈಕ್ ನೀಡಿದ್ದರು. ನಂತರ ಇಬ್ಬರು ಪರಸ್ಪರ ಸಾಮಾಜಿಕ ಮಾಧ್ಯಮದಲ್ಲಿ ಮಾತುಕತೆ ನಡೆಸಿ ಭೇಟಿಯಾಗಿದ್ದರು. ಇಬ್ಬರೂ ಪ್ರಧಾನಿ ಮೋದಿಯ ಸಮರ್ಥಕರಾಗಿದ್ದ ಕಾರಣ ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದರು. ಮದುವೆಯಾಗಿ ಒಂದು ತಿಂಗಳ ನಂತರ ಇದೀಗ ಈ ಜೋಡಿಯ ವೈವಾಹಿಕ ಜೀವನ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ದಾವೆ ನನ್ನನ್ನು ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸುತ್ತಾನೆ. ನಾನು ಆತ್ಮಹತ್ಯೆ ಮಾಡುವ ಹಂತಕ್ಕೂ ತಲುಪಿದ್ದೆ. ಗೌರವದ ನೆಪದಲ್ಲಿ ಅವರ ಮನೆಯಿಂದ ನಾನು ಏಕಾಂಗಿಯಾಗಿ ಹೊರಗೆ ಹೋಗುವ ಸ್ವಾತಂತ್ರವೂ ಇಲ್ಲ. ಫೋನ್‌ನಲ್ಲಿ ಮಾತನಾಡಿದರೂ ಸಂಶಯ ವ್ಯಕ್ತಪಡಿಸುತ್ತಾರೆ. ಎಲ್ಲದಕ್ಕೂ ಸಮಜಾಯಿಷಿ ನೀಡಬೇಕಾಗುತ್ತದೆ ಎಂದು ಅಲ್ಪಿಕಾ ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





